ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಲದ ಪ್ರಮಾಣ ಹೆಚ್ಚಳ : ಸಿದ್ದರಾಮಯ್ಯ

Social Share

ಬೆಂಗಳೂರು,ಜ.10- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ರಾಜ್ಯ ಸರ್ಕಾರದ ಸಾಲದ ಪ್ರಮಾಣ ಮೂರು ಲಕ್ಷ ಕೋಟಿಯಷ್ಟು ಹೆಚ್ಚಾಗಿದ್ದು, ಪ್ರತಿಯೊಬ್ಬ ಕನ್ನಡಿಗನ ಮೇಲೆ 86 ಸಾವಿರ ಕೋಟಿ ರೂಪಾಯಿ ಸಾಲ ಹೊರಿಸಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪ್ರಜಾಧ್ವನಿ ರಥಯಾತ್ರೆ ಕುರಿತು ಮಾಹಿತಿ ನೀಡುವ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ 2018ರವರೆಗೂ ರಾಜ್ಯದ ಸಾಲದ ಒಟ್ಟು ಪ್ರಮಾಣ 2.42 ಲಕ್ಷ ಕೋಟಿ ರೂಪಾಯಿ ಮಾತ್ರವಿತ್ತು.

ಬಿಜೆಪಿ ಸರ್ಕಾರ ಅಧಿಕಾರ ಬಂದ ಬಳಿಕ ಮೂರು ವರ್ಷದಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲದ ಪ್ರಮಾಣ 5.40 ಲಕ್ಷ ಕೋಟಿಯಷ್ಟಾಗಿದೆ. ಸಾಲ ಕಂತು ಮರುಪಾವತಿ ಮತ್ತು ಬಡ್ಡಿಗೆ 43 ಸಾವಿರ ಕೋಟಿ ಪಾವತಿಸಬೇಕಿದೆ. ಪ್ರತಿಯೊಬ್ಬ ಕನ್ನಡಿಗನ ಮೇಲೆ 86 ಸಾವಿರ ರೂಪಾಯಿ ಸಾಲ ಹೊರಿಸಲಾಗಿದೆ. ಹೀಗಾದರೆ ರಾಜ್ಯ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ವತಿಯಿಂದ ಬಿಜೆಪಿ ಸರ್ಕಾರದ ಮೇಲೆ ಆರೋಪಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದಕ್ಕೆ ಬಿಜೆಪಿ ಪಾಪದ ಪುರಾಣ ಎಂದು ನಾಮಕರಣ ಮಾಡಲಾಗಿದೆ. ಇದು ಅನೈತಿಕವಾಗಿ ರಚನೆಯಾದ ಸರ್ಕಾರ. ಜನ ಆಶೀರ್ವಾದ ಮಾಡಿರಲಿಲ್ಲ. ಆಪರೇಷನ್ ಕಮಲ ಮಾಡಿ, ಕೋಟ್ಯಂತರ ರೂಪಾಯಿ ಪಾಪದ ಹಣ ಕೊಟ್ಟು ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದರು. ಶಾಸಕರ ಖರೀದಿ ಮಾಡಲು ಖರ್ಚು ಮಾಡಿದ ಹಣ ಭ್ರಷ್ಟಾಚಾರದಿಂದ ಸಂಪಾದಿಸಿದಾಗಿತ್ತು ಎಂದು ಗಂಭೀರ ಆರೋಪ ಮಾಡಿದರು.

ಆಪ್ತರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರವಾಸ

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯಕ್ಕೆ ದೊಡ್ಡ ಕಳಂಕ ಬಂದಿದೆ. ಬೊಮ್ಮಾಯಿ ಅತ್ಯಂತ ಭ್ರಷ್ಟ ಮಾತ್ರವಲ್ಲ, ದುರ್ಬಲ ಮುಖ್ಯಮಂತ್ರಿ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂಪಾಯಿ ಕೊಡಲು ಶಿಫಾರಸ್ಸು ಮಾಡಿತ್ತು.

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ಸಚಿವೆ ನಿರ್ಮಲ ಸೀತಾರಾಂ ಕೇಂದ್ರ ಹಣಕಾಸು ಸಚಿವರಾಗಿದ್ದರು. ಜೊತೆಗೆ ಬಿಜೆಪಿಯ 25 ಮಂದಿ ಸಂಸದರು ಗೆದ್ದಿದ್ದರು. ಆದರೂ 15ನೇ ಹಣಕಾಸು ಶಿಫಾರಸ್ಸನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದೆ. ಪ್ರಧಾನಿ ಮುಂದೆ ನಮ್ಮ ಹಕ್ಕನ್ನು ಪ್ರತಿಪಾದಿಸಿ ಹಣ ತರುವ ತಾಕತ್ತು ಮುಖ್ಯಮಂತ್ರಿಗಾಗಲಿ, ಸಂಸದರಿಗಾಗಲಿ ಇಲ್ಲ ಎಂದರು.

14 ಮತ್ತು 15ನೇ ಹಣಕಾಸು ಆಯೋಗದ ನಡುವೆ ಶೇ. 1.7ರಷ್ಟು ಅನುದಾನ ಕಡಿತವಾಗಿದೆ. ಕೇಂದ್ರದ ಮೇಲೆ ಒತ್ತಡ ಹಾಕಿ ಅದನ್ನು ಪಡೆದುಕೊಳ್ಳಲಿಲ್ಲ. ಇವರ ಹೇಡಿತನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಜೊತೆಗೆ ಜಿಎಸ್‍ಟಿ, ಸರ್ಚ್‍ಜಾರ್ಜ್ ಸೇರಿ ರಾಜ್ಯದಿಂದ ಮೂರುವರೆ ಲಕ್ಷ ಕೋಟಿ ಆದಾಯ ಇದೆ. ಆದರೆ ಅದರಲ್ಲಿ ನಮಗೆ ಕೊಡುವ ಪಾಲು ಅತ್ಯಂತ ಕಡಿಮೆ ಇದೆ. ನಮ್ಮ ಪಾಲು ನ್ಯಾಯಯುತವಾಗಿ ಸಿಗದ ಕಾರಣಕ್ಕೆ ಸಾಲ ಮಾಡುವ ಪರಿಸ್ಥಿತಿ ಬಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯ ಉಳಿಸಲಿಕ್ಕಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಇದರಲ್ಲಿ ನಾವು ಅಧಿಕಾರ ನಡೆಸಬೇಕು ಎಂಬ ಸ್ವಾರ್ಥ ಇಲ್ಲ. ಗುತ್ತಿಗೆದಾರರ ಸಂಘದ ಮುಖ್ಯಸ್ಥರು ಲಂಚದ ಹಾವಳಿ ತಡೆಯಲಾಗದೆ ಪ್ರಧಾನಿಗೆ ಅಥವಾ ಸಚಿವರಿಗೆ ಪತ್ರ ಬರೆದಿದ್ದು ಇದೇ ಮೊದಲ ಬಾರಿಗೆ. ಗುತ್ತಿಗೆದಾರರ ಸಂಘ ಶೇ.40ರಷ್ಟು ಭ್ರಷ್ಟಚಾರದ ಆರೋಪ ಮಾಡಿತ್ತು, ಪ್ರಧಾನಿ ಅದಕ್ಕೆ ಉತ್ತರ ನೀಡಲಿಲ್ಲ. ಮಾತೇತ್ತಿದರೆ ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎನ್ನುತ್ತಿದ್ದ ಪ್ರಧಾನಿಯವರು ಮೌನ ಡೋಂಗಿತನವನ್ನು ಸ್ಪಷ್ಟಪಡಿಸಿದೆ ಎಂದು ಆರೋಪಿಸಿದರು.

ಇಷ್ಟೇ ಅಲ್ಲದೆ ನೇಮಕಾತಿ, ವರ್ಗಾವಣೆ, ಹುದ್ದೆ ಪಡೆಯಲು ನಾನಾ ಹಂತದಲ್ಲಿ ಲಂಚ ನೀಡಬೇಕಿದೆ. ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಖಾಸಗಿಯಾಗಿ ಮಾತನಾಡುವಾಗ ಅಳಲು ತೋಡಿಕೊಳ್ಳುತ್ತಾರೆ ಎಂದರು.

ಕೊರೊನಾ ಕಾಲಘಟ್ಟದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದರು, ಸುಮಾರು ಮೂರುವರೆ ಲಕ್ಷ ಜನ ಕೋವಿಡ್‍ನಿಂದ ಮೃತಪಟ್ಟರು. ಸರ್ಕಾರ ಸಾವಿನ ಸಂಖ್ಯೆಯಲ್ಲೂ ಸುಳ್ಳು ಹೇಳಿತ್ತು. ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲೂ ಎರಡುವರೆಯಿಂದ ಮೂರು ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಚಾರ ಮಾಡಿತ್ತು ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೋಷಾರೋಪಣಾ ಪಟ್ಟಿಯನ್ನು ಸಿದ್ದಪಡಿಸಿ ಜನರ ಮುಂದಿಡುತ್ತಿದೆ. ತನ್ನ ಹುಳುಕಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ದ್ವೇಷದ ರಾಜಕಾರಣವನ್ನು ಹೆಚ್ಚು ಮಾಡಿದೆ. ದಲಿತರು, ಅಲ್ಪಸಂಖ್ಯಾರು, ಹಿಂದುಳಿದವರು ಭಯದಿಂದ ಬದುಕುತ್ತಿದ್ದಾರೆ.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು..!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿ ಶೂನ್ಯವಾಗಿದೆ. ಸಾಲ ಹೆಚ್ಚಾಗಿದೆ. ರಾಜ್ಯವನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಮುಂದುವರೆಸಿದೆ. ಇದರಿಂದ ರಾಜ್ಯದ ಎಪಿಎಂಸಿಗಳಲ್ಲಿ ಏಳರಿಂದ ಎಂಟು ಸಾವಿರ ಕೋಟಿ ಆದಾಯ ಬದಲಿಗೆ 200 ಕೋಟಿ ರೂಪಾಯಿಗೆ ಕುಸಿದಿವೆ. ಬಹಳಷ್ಟು ಎಪಿಎಂಸಿಗಳು ಮುಚ್ಚಿ ಹೋಗುತ್ತಿವೆ ಎಂದರು. ಬೆಲೆ ಏರಿಕೆ ಜನ ಸಾಮಾನ್ಯರನ್ನು ಶೋಷಣೆ ಮಾಡುತ್ತಿದೆ. ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏಕೆ ಜಾಸ್ತಿಯಾಯಿತು. ಕೇಂದ್ರ ಸರ್ಕಾರ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಡಿ ಏಕೆ ನಿಲ್ಲಿಸಿದೆ ಎಂದರು.

ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ, ಬದಲಿಗೆ ಶ್ರೀಮಂತರ, ಉದ್ಯಮಿಗಳು ಪಡೆದಿದ್ದ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ಘೋಷಣೆ ಮಾಡಿ ಮನ್ನಾ ಮಾಡಿದೆ ಎಂದರು.

ಕಾಂಗ್ರೆಸ್‍ನ ಪ್ರಜಾಧ್ವನಿ ಯಾತ್ರೆ ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ನಂತರ ವಿಧಾನಸಭಾ ಕ್ಷೇತ್ರಗಳಿಗೆ ಎರಡು ಗುಂಪು ಮಾಡಿಕೊಂಡು ಹೋಗುತ್ತೇವೆ. ಒಂದು ತಂಡ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ, ಮತ್ತೊಂದು ತಂಡ ನನ್ನ ನೇತೃತ್ವದಲ್ಲಿ ಹಿರಿಯ ನಾಯಕರ ಜೊತೆ ಪ್ರವಾಸ ಮಾಡಲಿದೆ. ಮೊದಲ ಹಂತದಲ್ಲಿ ನಾನು ಉತ್ತರ ಕರ್ನಾಟಕದಲ್ಲಿ , ಡಿ.ಕೆ.ಶಿವಕುಮಾರ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತೇವೆ. ಎರಡನೇ ಹಂತದಲ್ಲಿ ನಾನು ದಕ್ಷಿಣಕ್ಕೆ, ಡಿ.ಕೆ.ಶಿವಕುಮಾರ್ ತಂಡ ಉತ್ತರ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ ಎಂದರು.

Siddaramaiah, Shivakumar, BJP, government, Congress,

Articles You Might Like

Share This Article