ಬೆಂಗಳೂರು,ಜ.10- ವಿಧಾನಸಭೆ ಚುನಾವಣೆ ಪೂರ್ವತಯಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಳೆಯಿಂದ 20 ದಿನಗಳ ಪ್ರಜಾಧ್ವನಿ ರಥಯಾತ್ರೆ ಆರಂಭಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಪ್ರವಾಸ ತೆರಳಲಿದ್ದಾರೆ.
ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು ಬಿಜೆಪಿಯ ಪಾಪದ ಪುರಾಣ ಎಂಬ ದೋಷಾರೋಪಣಾ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಮಹಾತ್ಮಗಾಂಧಿ ಬೆಳಗಾವಿಯಲ್ಲಿ ತಂಗಿದ್ದ ಗಾಂಬಾವಿಯಿಂದ ನಾಳೆ ಪ್ರಜಾಧ್ವನಿ ರಥಯಾತ್ರೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ನಾನು ಮತ್ತು ಸಿದ್ದರಾಮಯ್ಯ ಜೊತೆಯಾಗಿ 20 ಜಿಲ್ಲೆಗಳಲ್ಲಿ ಸಂಚರಿಸಲಿದ್ದೇವೆ. ಜನವರಿ 28ರವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಬಳಿಕ ನಾವಿಬ್ಬರು ಪ್ರತ್ಯೇಕ ತಂಡಗಳಲ್ಲಿ ಕ್ಷೇತ್ರವಾರು ಪ್ರವಾಸ ಮಾಡುತ್ತೇವೆ ಎಂದು ತಿಳಿಸಿದರು.
ಮತ್ತೊಂದು ಮಹಾ ಯಾತ್ರೆ ಮೂಲಕ ಈ ವರ್ಷ ಕರ್ನಾಟಕ ಪ್ರದೇಶ ಕಾಂಗ್ರೆಸ್ ಶುಭಾರಂಭ ಮಾಡಿದೆ. ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು ಇಂದು ಯಾತ್ರೆಗಾಗಿ ಸಿದ್ಧವಾಗಿರುವ ಬಸ್ಸಿಗೆ ಕೆಪಿಸಿಸಿ ಕಚೇರಿ ಬಳಿ ಪೂಜೆ ಸಲ್ಲಿಸಲಾಯಿತು. ಬಿಜೆಪಿಯ ಅಸಲಿಯತ್ತನ್ನು ಬಯಲು ಮಾಡಲು ಈ ಯಾತ್ರೆ ಸಹಕಾರಿಯಾಗಲಿದೆ. pic.twitter.com/IIijTY1uar
— DK Shivakumar (@DKShivakumar) January 10, 2023
ಕರ್ನಾಟಕ ಅಭಿವೃದ್ಧಿ ಶೀಲ ಆಡಳಿತ ಎಂದು ವಿಶ್ವಾದ್ಯಂತ ಖ್ಯಾತಿ ಗಳಿಸಿತ್ತು. ಇಲ್ಲಿ ಬಂಡವಾಳ ಹೂಡಿಕೆ ಮಾಡಲು, ವಾಸಿಸಲು, ಉದ್ಯೋಗ ಪಡೆಯಲು ದೇಶ, ವಿದೇಶಗಳಿಂದ ಜನ ಬಯಸುತ್ತಿದ್ದರು. ಇದಕ್ಕೆ ಪ್ರಸ್ತುತ ಕಳಂಕ ಬಂದಿದೆ. ಬಿಜೆಪಿ ಸರ್ಕಾರದ ಭ್ರಷ್ಟಚಾರದಿಂದ ಜನ ಬೇಸತ್ತಿದ್ದಾರೆ. ಹೆಣದ ಮೇಲೆ ಹಣ ಪಡೆಯಲಾಗಿದೆ. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ನಿರುದ್ಯೋಗ ತಾಂಡವಾಗುತ್ತಿದೆ ಎಂದರು.
ಚುನಾವಣೆಗೂ ಮುನ್ನಾ ಬಿಜೆಪಿ ನೀಡಿದ ಭರವಸೆಗಳನ್ನು ಈಡೇಸಿರಿಲ್ಲ. 600 ಭರವಸೆ ನೀಡಿತ್ತು, ಅದರಲ್ಲಿ 50 ಮಾತ್ರ ಈಡೇರಿದೆ, ಇನ್ನೂ 550 ಭರವಸೆಗಳು ಈಡೇರಿಲ್ಲ. ಕಾಂಗ್ರೆಸ್ ಎರಡು ತಿಂಗಳಿನಿಂದ ಬಿಜೆಪಿಯ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದೆ. ಅದಕ್ಕೆ ಈವರೆಗೂ ಒಂದಕ್ಕೂ ಉತ್ತರ ನೀಡಿಲ್ಲ ಎಂದರು.
ನಿರುದ್ಯೋಗಿಗಳು ಆಕ್ರೋಶಿತರಾಗಿದ್ದಾರೆ. ಶೇ.40ರಷ್ಟು ಕಮಿಷನ್ ಬಗ್ಗೆ ಗುತ್ತಿಗೆದಾರರು ದೂರಿದ್ದಾರೆ. 83190 ಜನ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪೆನಿಗಳು ಮುಚ್ಚಿ ಹೋಗುವ ಪರಿಸ್ಥಿತಿ ಬಂದಿದೆ. ಹೊಸ ಬಂಡವಾಳ ಹೂಡಿಕೆಗೆ ಯಾರು ಮುಂದೆ ಬರುತ್ತಿಲ್ಲ. ನೆರೆಯ ತೆಲಂಗಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಹೋಗುತ್ತಿದೆ ಎಂದು ವಿವರಿಸಿದರು.
ಪಿಎಸ್ಐ ಸೇರಿದಂತೆ ಸರ್ಕಾರಿ ಉದ್ಯೋಗಳ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾರೆ. ತಂತ್ರಜ್ಞಾನವನ್ನೇ ತಿರುಚಿ ಅವ್ಯವಹಾರ ನಡೆಸಲಾಗಿದೆ. ಐಪಿಎಸ್, ಐಎಎಸ್ ಅಧಿಕಾರಿಗಳು ಭ್ರಷ್ಟಚಾರದಿಂದ ಈ ಸರ್ಕಾರದಲ್ಲಿ ಜೈಲು ಸೇರಿದ್ದಾರೆ.
ಭ್ರಷ್ಟಚಾರವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಅದೇ ಹಗರಣಗಳನ್ನು ಬಿಜೆಪಿಯವರು ಹೇಳಿದ್ದಾರೆ. ಆದರೆ ಅವರ ಮೇಲೆ ಪ್ರಕರಣ ದಾಖಕಲಾಗಿಲ್ಲ ಎಂದು ದೂರಿದರು.
ವಿಧಾನಸೌಧದೆದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಜ.13 ರಂದು ಶಂಕುಸ್ಥಾಪನೆ
ಬಿಜೆಪಿಯ ಪಾಪದ ಪುರಾಣವನ್ನು ಜನರಿಗೆ ತಿಳಿಸಲು ಪ್ರಜಾಧ್ವನಿ ಯಾತ್ರೆಯನ್ನು ಆರಂಭಿಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಯಾತ್ರೆಯಲ್ಲಿ ಮುಂದೆ ನಾವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ ಎಂಬ ಭರವಸೆಗಳನ್ನು ಜನರಿಗೆ ನೀಡುತ್ತೇವೆ ಮತ್ತು ಅದನ್ನು ನಾವು ಈಡೇರಿಸುತ್ತೇವೆ ಎಂಬ ಕಾರಣಕ್ಕೆ ಇದನ್ನು ಗ್ಯಾರಂಟಿ ಯಾತ್ರೆ ಎಂದು ಕರೆಯುತ್ತಿದ್ದೇವೆ ಎಂದು ಹೇಳಿದರು.
ಕರುನಾಡಿಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಎಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ. ಜನರ ಯಾವುದೇ ಹೋರಾಟಗಳಿದ್ದರೂ ಕಾಂಗ್ರೆಸ್ ಕೈ ಜೊಡಿಸಲಿದೆ. ನಿಮ್ಮ ಹಕ್ಕು ನಮ್ಮ ಹೋರಾಟ ಎಂಬ ಘೋಷಣಾ ವಾಕ್ಯವನ್ನು ಪಾಲಿಸುತ್ತೇವೆ. ಜನರು ತಮ್ಮ ಬೇಡಿಕೆ ಮತ್ತು ಸಲಹೆಗಳನ್ನು ಪ್ರಜಾಧ್ವನಿ ವೆಬ್ಸೈಟ್ ಮೂಲಕವೂ ನಮಗೆ ಕಳುಹಿಸಬಹುದು. ಜೊತೆಗೆ 9537224224 ಸಹಾಯವಾಣಿ ಸ್ಥಾಪಿಸಲಾಗಿದ್ದು ಅದಕ್ಕೆ ದಿನದ 24 ಗಂಟೆ ಕರೆ ಮಾಡಿ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪಾಪದ ಪುರಾಣ ಎಂಬ ವಿಡಿಯೋ ಪ್ರಸಾರ ಮಾಡಲಾಯಿತು. ಅದರಲ್ಲಿ ಚರ್ಮಗಂಟು ರೋಗದಿಂದ ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಶಾಲೆಗಳು ಬಿರುಕು ಬಿಟ್ಟಿವೆ. ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆ ಸರಿ ಇಲ್ಲ. ಶೋಷಿತ ವರ್ಗಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂಬ ಹಲವು ಆರೋಪಗಳನ್ನು ಮಾಡಲಾಗಿದೆ. ಸಂವಿಧಾನವನ್ನು ಉಳಿಸಲು, ಕುಟುಂಬದ ಸಂವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.
‘ವಿಶ್ವ ಹಿಂದಿ ದಿವಸ್’ ಆಚರಣೆ ನಿಲ್ಲಿಸುವಂತೆ ಜೆಡಿಎಸ್ ಆಗ್ರಹ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ ಖರ್ಗೆ, ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ, ದಿನೇಶ್ ಗೂಳಿಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ರಥಯಾತ್ರೆಗೆ ಬಳಸಿಕೊಳ್ಳುವ ಬಸ್ ಅನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಯಾತ್ರೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
Siddaramaiah, Shivakumar, jointly, lead,Congress, bus yatra,