ಶಾಲೆಗಳಲ್ಲಿ ಧ್ಯಾನ ವಿರೋಧಿಸಿದ ಸಿದ್ದುಗೆ ಸಚಿವ ಬಿ.ಸಿ.ನಾಗೇಶ್ ತಿರುಗೇಟು

Social Share

ಬೆಂಗಳೂರು,ನ.5-ಶಾಲಾಕಾಲೇಜುಗಳಲ್ಲಿ ಹತ್ತು ನಿಮಿಷ ಧ್ಯಾನ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ, ನೀವು ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

ನಿಮ್ಮ ಅಧಿವಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ, ಅಭಿವೃದ್ಧಿ ಕಾರ್ಯಗಳನ್ನು ನೀವು ಮಾಡಿದ್ದರೇ ಶಿಕ್ಷಕರು ಮತ್ತು ಮೂಲ ಸೌಕರ್ಯಗಳ ಕೊರತೆ ಈ ಪ್ರಮಾಣದಲ್ಲಿ ಇರುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.
ನೀವು ಅಧಿಕಾರದಲ್ಲಿದ್ದಾಗ ಬರದ ಶೈಕ್ಷಣಿಕ ಅಭಿವೃದ್ಧಿಯ ಆಲೋಚನೆಗಳು ಈಗ ನಿಮಗೆ ಬರುತ್ತಿರುವುದು ಸಂತೋಷ! ಎಂದು ವ್ಯಂಗ್ಯವಾಡಿದ್ದಾರೆ.

ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ನಿಮ್ಮಂತವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ. ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಅರ್ಜಿ ಹಾಕದವರು, ಪರೀಕ್ಷೆ ಬರೆಯದವರನ್ನು ಶಿಕ್ಷಕರಾಗಿ ನೇಮಿಸಿ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ ಅಪಕೀರ್ತಿ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರ, ಸಾಲು ಸಾಲು ಹಗರಣಗಳಲ್ಲಿ ಮಿಂದೆದ್ದಿರುವುದು ಯಾರೆಂದು ರಾಜ್ಯದ ಜನತೆಗೆ ತಿಳಿದಿದೆ. ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲೇ 30 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು/ಉಪನ್ಯಾಸಕರ ಸೇವೆ ಪಡೆಯಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ದೈಹಿಕ ಶಿಕ್ಷಕರು ಸೇರಿದಂತೆ 2,500 ಪ್ರೌಢಶಾಲಾ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಆರಂಭಿಸಲಾಗುತ್ತಿದೆ ಎಂದಿದ್ದಾರೆ. 21ನೇ ಶತಮಾನದ ಅಗತ್ಯಗಳಿಗೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ನೀಗಿಸಲು 8,100 ಕೊಠಡಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2022)

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೋವಿಡ್-19 ಕಾರಣ ಎರಡು ವರ್ಷಗಳ ಕಾಲ ಭೌತಿಕ ತರಗತಿಗಳಿಲ್ಲದೆ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆ, ಏಳಿಗೆ ಮತ್ತು ಅಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಸಂದರ್ಭಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಡೀ ದೇಶದಲ್ಲೇ ಮೊದಲು ನಮ್ಮ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಭೌತಿಕ ತರಗತಿಗಳನ್ನು ನಮ್ಮ ಸರ್ಕಾರ ಆರಂಭಿಸಿತು ಎಂದು ಸಮರ್ಥಿಸಿಕೊಂಡಿದ್ದಾರೆ.

Articles You Might Like

Share This Article