ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ ಸ್ಪರ್ಧೆ..?

Social Share

ಬೆಂಗಳೂರು,ಆ.8- ಗೆಲ್ಲುವ ವಿಧಾನಸಭಾ ಕ್ಷೇತ್ರದ ಹುಡುಕಾಟದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕೋಲಾರದಿಂದಲೂ ನಿರಾಸೆಯಾಗುವ ಸೂಚನೆಯನ್ನು ಬಿಜೆಪಿ ನೀಡಿದೆ. ಕೋಲಾರದಿಂದಲೇ ಸ್ರ್ಪಧಿಸಿದರೆ, ಅಪೃತ್ತ ಕಾಂಗ್ರೆಸ್ ನಾಯಕರನ್ನು ಸೆಳೆದು, ಅವರನ್ನೇ ಸಿದ್ದರಾಮಯ್ಯ ವಿರುದ್ಧ ಕಣಕ್ಕಳಿಸುವ ಆಲೋಚನೆಯಲ್ಲಿ ಕೇಸರಿ ಪಾಳಯವಿದೆ.

ತಮ್ಮ ರಾಜಕೀಯ ಬದುಕಿನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ 2023ರ ನಂತರ ಚುನಾವಣೆ ಸ್ರ್ಪಧಿಸುವುದಿಲ್ಲ ಎಂದಿದ್ದಾರೆ. ಈ ಹೇಳಿಕೆ ಮೂಲಕ ಜನರ ಅನುಕಂಪ ಗಿಟ್ಟಿಸಿ ಗೆಲ್ಲುವ ಯೋಚನೆ ಮಾಡಿರುವ ಅವರಿಗೆ ಬಿಜೆಪಿ ಮಗ್ಗುಲ ಮುಳ್ಳಾಗಿದೆ.

ಇದರ ಜೊತೆ ಜೆಡಿಎಸ್ ಸಹ ಸಿದ್ದರಾಮಯ್ಯನವರನ್ನು ಸೋಲಿಸಲು ಪಣತೊಟ್ಟಿದೆ. ಮುಂದಿನ ಮುಖ್ಯಮಂತ್ರಿ ರೇಸ್‍ನಲ್ಲಿ ಅತ್ಯಂತ ಪ್ರಮುಖ ಹೆಸರಾಗಿ ಕೇಳಿ ಬರುತ್ತಿರುವ ಸಿದ್ದರಾಮಯ್ಯನವರ ಸೋಲಿಗೆ ಕೆಲ ರಾಜ್ಯ ಕಾಂಗ್ರೆಸ್ ನಾಯಕರು ಸಹ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಕಾಂಗ್ರೆಸ್ ನಾಯಕರ ಅಸಮಾಧಾನವನ್ನೇ ಬಿಜೆಪಿ ಸದ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ವಿರುದ್ಧ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದೆ. ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಸೂಕ್ತ ಕ್ಷೇತ್ರ ಸಿಗುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ರ್ಪಧಿಸುವುದಿಲ್ಲ ಎಂದು ಬಹಿರಂಗವಾಗಿ ಸಿದ್ದರಾಮಯ್ಯನವರೇ ಈಗಾಗಲೇ ಘೋಷಿಸಿದ್ದಾರೆ.

ಬೆಂಗಳೂರು ನಗರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಚಾಮರಾಜಪೇಟೆಯಿಂದ ಕಣಕ್ಕಿಳಿಯಲು ಚಿಂತನೆ ನಡೆಸಿದ್ದರು.ಆದರೆ, ಈ ಸಾರಿ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಹಾಗೂ ಮುಸಲ್ಮಾನ್ ಸಮುದಾಯದ ಮತಗಳು ಸಮಾನವಾಗಿ ಹಂಚಿಕೆಯಾಗಿದ್ದು, ಸಂಪೂರ್ಣ ಮುಸ್ಲಿಂ ಮತಗಳು ತಮ್ಮ ಪಾಲಿಗೆ ಲಭಿಸದಿದ್ದರೆ ಸೋಲುವ ಸಾಧ್ಯತೆ ಹೆಚ್ಚಿದೆ ಎಂಬುದು ಅರಿವಾಗಿದೆ. ಈ ಹಿನ್ನೆಲೆ ಅವರು ಬೇರೊಂದು ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ.

ಬಾದಾಮಿಯತ್ತ ಮತ್ತೆ ತೆರಳುವ ಯೋಚನೆ ಸಿದ್ದರಾಮಯ್ಯನವರಗಿಲ್ಲ. ಇದರಿಂದ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ಕೋಲಾರ ಇಲ್ಲವೇ, ತುಮಕೂರಿನಿಂದ ಸ್ರ್ಪಧಿಸುವ ಯೋಚನೆಯನ್ನು ಮಾಡಿದ್ದರು. ಇದಕ್ಕೆ ಪೂರಕ ಎಂಬಂತೆ ಕೋಲಾರ ಜಿಲ್ಲೆಯ ವಿವಿಧ ಹಂತದ ನಾಯಕರ ಜೊತೆ ಹಲವು ಸುತ್ತಿನ ಸಭೆಯನ್ನು ಸಹ ನಡೆಸಿದ್ದಾರೆ.

ಸಿದ್ದರಾಮಯ್ಯರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿಗೆ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಉತ್ತಮ ದಾಳವಾಗಿ ಲಭಿಸಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿದರೆ ಅವರ ಪ್ರತಿಸ್ರ್ಪಧಿಯಾಗಿ ಮುನಿಯಪ್ಪರನ್ನೇ ಕಣಕ್ಕಿಳಿಸುವ ಚಿಂತನೆಯನ್ನು ಬಿಜೆಪಿ ನಡೆಸಿದೆ ಎನ್ನಲಾಗುತ್ತಿದೆ.

ಪ್ರಮುಖವಾಗಿ ಸಿದ್ದರಾಮಯ್ಯ ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕೋಲಾರದ ನಾಯಕರಾದ ಕೊತ್ತೂರು ಮಂಜುನಾಥ ಹಾಗೂ ಎಂ.ಸಿ.ಸುಧಾಕರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವುದು ಮುನಿಯಪ್ಪನವರ ಅಸಹನೆಗೂ ಕಾರಣವಾಗಿದೆ.

ತಮ್ಮ ವಿರೋಧದ ನಡುವೆಯೂ ಇವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಮುನಿಯಪ್ಪರನ್ನ ಮನವೊಲಿಸಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಯೋಚನೆಯಲ್ಲಿ ಬಿಜೆಪಿ ತೊಡಗಿದೆ.

ಈಗಾಗಲೇ ಒಂದೆರಡು ಸುತ್ತಿನ ಮಾತುಕತೆಯನ್ನು ಮುನಿಯಪ್ಪ ಜೊತೆ ಬಿಜೆಪಿ ನಾಯಕರು ನಡೆಸಿದ್ದಾರೆ. ಬಿಜೆಪಿಗೆ ಸೇರು ಬಗ್ಗೆ ಪೂರ್ಣ ಪ್ರಮಾಣದ ಸಮ್ಮತಿಯನ್ನು ಇನ್ನೂ ನೀಡಿಲ್ಲ. ಅಂತೆಯೇ ಸಂಪೂರ್ಣ ನಿರಾಕರಣೆಯನ್ನೂ ಮಾಡಿಲ್ಲ ಎಂಬ ಮಾಹಿತಿ ಇದೆ.

ಒಂದು ವೇಳೆ ಸಿದ್ದರಾಮಯ್ಯ ತುಮಕೂರು ನಗರದಿಂದ ಸ್ರ್ಪಧಿಸಲು ಮುಂದಾದರೆ ಮಾಜಿ ಸಂಸದ ಮುದ್ದಹನುಮೇಗೌಡರನ್ನು ಸೆಳೆಯಲು ಬಿಜೆಪಿ ಯೋಜನೆ ರೂಪಿಸಿದೆ. ದೇವೇಗೌಡರಿಗಾಗಿ ಲೋಕಸಭೆ ಚುನಾವಣೆ ಸ್ಪರ್ಧೆಯನ್ನು ಬಿಟ್ಟುಕೊಟ್ಟಿದ್ದ ಮುದ್ದಹನುಮೇಗೌಡ ರಾಜ್ಯಸಭೆ ಇಲ್ಲವೇ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಳ್ಳುವ ನಿರೀಕ್ಷೆ ಹೊಂದಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ ಪೂರಕ ಸಹಕಾರ ಸಿಗದ ಹಿನ್ನೆಲೆ ಅವರು ಸಹ ತೀವ್ರ ಅಸಮಾಧಾನಗೊಂಡಿದ್ದಾರೆ.

ಹೊಸ ಕ್ಷೇತ್ರದ ಆಯ್ಕೆಯ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಬಿಜೆಪಿ ಹಾಗೂ ಜೆಡಿಎಸ್ ತೊಡಕಾಗಿ ಕಾಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸುವ ಕಾಂಗ್ರೆಸ್‍ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಅವರನ್ನು ವಿಧಾನಸಭೆ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸಿದ್ದು, ಇದರಲ್ಲಿ ಎಷ್ಟು ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

Articles You Might Like

Share This Article