ಐಕ್ಯತಾ ಯಾತ್ರೆಗೆ ಅಡ್ಡಿಪಡಿಸಿದರೆ ಹುಷಾರ್ : ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್

Social Share

ಚಾಮರಾಜನಗರ, ಸೆ.30- ಭಾರತ ಐಕ್ಯತಾ ಯಾತ್ರೆಗೆ ಅಡ್ಡಿಪಡಿಸುವ ಪ್ರಯತ್ನವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಯ ಯಾವ ನಾಯಕರು ರಾಜ್ಯದಲ್ಲಿ ತಿರುಗಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಕೇರಳದಿಂದ ರಾಜ್ಯಕ್ಕೆ ಆಗಮಿಸಿದ ಭಾರತ ಐಕ್ಯತಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ರೀತಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 571 ಕಿ.ಮೀಗಳ ಯಾತ್ರೆಯನ್ನು ಯಾರೂ ಮಾಡಿಲ್ಲ. ಇದು ಅಭೂತಪೂರ್ವವಾದ ಕಾರ್ಯಕ್ರಮ. ಇದಕ್ಕೆ ನಮ್ಮೆಲ್ಲರ ಬೆಂಬಲ ಇರುವುದಷ್ಟೇ ಅಲ್ಲ ಸಕ್ರಿಯ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದರು.

ಯಾತ್ರೆಗೆ ಅಡ್ಡಿಪಡಿಸಲು ಬಿಜೆಪಿ ನಾನಾ ರೀತಿಯ ಹುನ್ನಾರಗಳನ್ನು ನಡೆಸಿದೆ. ಫ್ಲೆಕ್ಸ್, ಬ್ಯಾನರ್‍ಗಳನ್ನು ಹರಿಯುವುದು, ಮಸಿ ಬಳಿಯುವುದನ್ನು ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿದೆ. ಅವರು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದೆ ಬಿಜೆಪಿಯವರ ಜೊತೆ ಶಾಮೀಲಾದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಮುಂದಿನ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿಯವರು ನಮ್ಮ ಎಚ್ಚರಿಕೆಯನ್ನು ಕಡೆಗಣಿಸಿ ಅಡ್ಡಿಪಡಿಸುವುದನ್ನು ಮುಂದುವರೆಸಿದರೆ ರಾಜ್ಯದಲ್ಲಿ ಬಿಜೆಪಿ ನಾಯಕರು ತಿರುಗಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಿಸುವುದಾಗಿ ಮತ್ತೊಮ್ಮೆ ಎಚ್ಚರಿಸಿದರು.

ಬಿಜೆಪಿ ಅಕಾರಕ್ಕೆ ಬಂದಾಗಲೆಲ್ಲ ಸಂವಿಧಾನ ಬದಲಾವಣೆ ಮಾಡುವ ಪ್ರಯತ್ನ ಮಾಡುತ್ತದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನ ಸರಿಯಿಲ್ಲ. ಹಾಗಾಗಿ ಬೇರೆ ಸಂವಿಧಾನ ರಚಿಸುವ ಅಗತ್ಯವಿದೆ ಎಂದು ಬಿಜೆಪಿಯ ಹಲವಾರು ನಾಯಕರು ಮಾತನಾಡುತ್ತಾರೆ. ಸಂವಿಧಾನ ಬದಲಾವಣೆಗೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಹೇಳಿದರು.

ಬಿಜೆಪಿಯವರಿಗೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ದೇಶದಲ್ಲಿ ಮಹಿಳೆಯರು, ಯುವಕರು, ರೈತರು, ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಪರಿಹಾರ ಇಲ್ಲ. ಬದಲಾಗಿ ದೇಶವನ್ನು ವಿಭಜಿಸುವ ರಾಜಕಾರಣ ಮಾಡುತ್ತಲೇ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ನರೇಂದ್ರಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಬೆಲೆ ಏರಿಕೆ, ಕೋಮು ರಾಜಕಾರಣಗಳು ಮಿತಿಮೀರಿವೆ. ಭ್ರಷ್ಟಾಚಾರ ಎಲ್ಲೆ ಮೀರಿದೆ. ರಾಜ್ಯದಲ್ಲಿ ಶೇ.40ರಷ್ಟು ಕಮೀಷನ್ ದಂಧೆ ಅವ್ಯಾಹತವಾಗಿ ಮುಂದುವರೆದಿದೆ. ಇವುಗಳ ವಿರುದ್ಧ ನಾವು ಒಗ್ಗಟ್ಟಿನ ಹೋರಾಟ ಮಾಡಬೇಕು. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕಾದರೂ ಸಿದ್ದರಾಗಬೇಕಿದೆ ಎಂದರು.

Articles You Might Like

Share This Article