ಬೆಂಗಳೂರು,ಅ.7- ಮುಡಾ ಪ್ರಕರಣದಿಂದ ಸರ್ಕಾರಕ್ಕೆ ಸಾಕಷ್ಟು ಮುಜುಗರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜ ಯೇಂದ್ರ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಯಾವುದೇ ಸಂದರ್ಭದಲ್ಲೂ ಬೀಳಬಹುದು. ಸಿದ್ದರಾಮಯ್ಯನವರು ಈಗಲಾದರೂ ಬಂಡತನ ಬಿಟ್ಟು ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಅದೇನೋ ಕಟ್ಟಡದ ನಕ್ಷೆಯನ್ನು ಹಿಡಿದುಕೊಂಡು ಅವರಿಗೆ ವಿವರಣೆ ನೀಡುತ್ತಿದ್ದರು. ಮತ್ತೊಂದು ಕಡೆ ಅನೇಕರು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ಸರ್ಕಾರ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರಿಗೆ ಗೌರವ ಇದ್ದರೆ ಮೊದಲು ರಾಜೀನಾಮೆ ಕೊಡಿ. ರಾಜ್ಯದಲ್ಲಿ ಒಂದು ರೀತಿ ಅರಾಜಕತೆ ಸೃಷ್ಟಿಯಾಗಿದೆ. ಕೆಲವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾರೆ. ವಾಲೀಕಿ ಮತ್ತು ಮುಡಾ ಪ್ರಕರಣ ತನಿಖೆಯಾಗಬೇಕು. ಡಿ.ಕೆ.ಶಿವಕುಮಾರ್ ಪ್ಲಾನ್ ಹಾಕಿಕೊಂಡೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ಅವೈಜ್ಞಾನಿಕದಿಂದ ಕೂಡಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದರು. ಈ ವರದಿಯ ಬಗ್ಗೆ ಬಿಜೆಪಿ ಮಾತ್ರವಲ್ಲದೆ ಒಕ್ಕಲಿಗರ ಸಂಘ ವೀರಶೈವ ಮಹಾಸಭಾ ಸೇರಿದಂತೆ ಅನೇಕರು ಆಕ್ಷೇಪಿಸಿದ್ದಾರೆ. ಸ್ವತಃ ಸಂಪುಟದ ಸಹೋದ್ಯೋಗಿಗಳೇ ವರದಿ ಅನುಷ್ಠಾನ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರಿಗೂ ಕೂಡ ಅನ್ಯಾಯವಾಗದಂತೆ ಸರ್ಕಾರ ಕ್ರಮ ಜರುಗಿಸಲಿ ಎಂದು ಕೋರಿದರು.
ಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿಗೆ ಪ್ರಾಮಾಣಿಕತೆ ಕೊರತೆ ಎದ್ದು ಕಾಣುತ್ತಿದೆ. ಅವರಿಗೆ ನಿಜವಾಗಿ ಕಾಳಜಿ ಇದ್ದಿದ್ದರೆ ವರದಿಯನ್ನು ಈ ವೇಳೆಗಾಗಲೇ ಅನುಷ್ಠಾನ ಮಾಡಬಹುದಿತ್ತು. ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಿದೆ. ಶಿವಕುಮಾರ್ ಮತ್ತು ಶಾಮನೂರ ಶಿವಶಂಕರಪ್ಪ ಏನು ಹೇಳಿದ್ದಾರೆ ಎಂದು ಪ್ರಶ್ನಿಸಿದರು. ತಮ ಕುರ್ಚಿಗೆ ಕುತ್ತು ಬಂದಿದೆ ಎಂದು ಈಗ ಒಳಮೀಸಲಾತಿ, ಜಾತಿಗಣತಿ ವರದಿ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ನಿಮ ಕಾಲದಲ್ಲಿಯೇ ಇದು ಪೂರ್ಣಗೊಂಡಿತ್ತು. ನಿಜವಾಗಿಯೂ ಪ್ರಾಮಾಣಿಕತೆ ಇದ್ದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ ಎಂದು ಹೇಳಿದರು.
ಯಾರಿಗೂ ತಲೆ ಹಿಡಿಯಲ್ಲ: ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ವಿಜಯೇಂದ್ರ ನಾನು ಯಾರಿಗೂ ತಲೆ ಹಿಡಿಯುವಂತ ರಾಜಕಾರಣ ಮಾಡಿಲ್ಲ. ಅದರ ಅಗತ್ಯವೂ ನನಗೆ ಇಲ್ಲ. ನಮ ತಂದೆ ಯಡಿಯೂರಪ್ಪ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ ಎಂದು ಕಿಡಿಕಾರಿದರು.
ಮುಡಾ ಮತ್ತು ವಾಲೀಕಿ ಪ್ರಕರಣಗಳು ಪ್ರಾಮಾಣಿಕವಾಗಿ ತನಿಖೆಯಾಗಬೇಕೆಂಬುದು ನಮ ಒತ್ತಾಯ. ಸರ್ಕಾರ ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿತ್ತು. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಯಾರು ಏನು ಹೇಳಿದ್ದಾರೆ ಎಂಬುದು ಬೇಡ. ಕುಮಾರಸ್ವಾಮಿ ಏನು ಹೇಳಿದ್ದಾರೆ ಎಂಬುದು ಮುಖ್ಯ. ಅಂತಿಮವಾಗಿ ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿರುವುದಕ್ಕೆ ಸ್ಪಷ್ಟನೆ ನೀಡಿದ ಅವರು, ನಮ ಮತಕ್ಷೇತ್ರವಾದ ಶಿಕಾರಿಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ಇಲ್ಲಿ ಟೋಲ್ ಇರುವುದರಿಂದ ರೈತರಿಗೆ ಬಡವರು, ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಬೇಕೆಂದು ಮನವಿ ಮಾಡಲಾಗಿದೆ. ನಮ ಮನವಿಗೆ ಸ್ಪಂದಿಸಿರುವ ಸಚಿವರು ಶೀಘ್ರದಲ್ಲೇ ಸಭೆ ಕರೆದು ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.