ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಬಿಟ್ಟರೆ ನಾಯಕರೇ ಇಲ್ಲ : ಸಿದ್ದರಾಮಯ್ಯ

Social Share

ಮೊಳಕಾಲ್ಮೂರು,ಅ.13- ಬಿಜೆಪಿಯಲ್ಲಿ ನಾಯಕರೇ ಇಲ್ಲ. ಯಡಿಯೂರಪ್ಪರನ್ನು ಬಿಟ್ಟು ಪ್ರಚಾರಕ್ಕೆ ಹೋಗಲು ಅವರಿಗೆ ಆಗುತ್ತಿಲ್ಲ. ಕಾಂಗ್ರೆಸ್‍ನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಭಾರತ ಐಕ್ಯತಾ ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಭಿನ್ನಮತವಿದೆ ಎಂದು ಪ್ರಚಾರ ಮಾಡುತ್ತಾ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ನಮ್ಮಲ್ಲಿ ಹೊಂದಾಣಿಕೆ ಇದೆ. ಆದರೆ, ಅವರಲ್ಲಿ ಎಲ್ಲಿ ಹೊಂದಾಣಿಕೆ ಇದೆಯೇ ಎಂದು ಹೇಳಲಿ ಎಂದು ಪ್ರಶ್ನಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಪರಿಷತ್ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಅವರು ಬಾಯಿಗೆ ಬಂದಂತೆ ಟೀಕೆ ಮಾಡುತ್ತಾರೆ. ಪಿಎಸ್‍ಐ ಹಗರಣದಲ್ಲಿ ಯಡಿಯೂರಪ್ಪ ಅವರ ಮಗನೇ ಪಾಲುದಾರನಾಗಿರುವುದನ್ನು ಯತ್ನಾಳ್ ಬಹಿರಂಗವಾಗಿಯೇ ಹೇಳಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ ಬಿಜೆಪಿಯವರು ಭಂಡತನದಿಂದ ಮಾತನಾಡುತ್ತಾರೆ. ಇಂಥವರಿಗೆ ಏನು ಹೇಳುವುದು ಎಂದು ಕಿಡಿಕಾರಿದರು.

ಯಡಿಯೂರಪ್ಪ ಅವರನ್ನು ಬಿಟ್ಟು ಬಿಜೆಪಿಯವರಿಗೆ ಪ್ರಚಾರಕ್ಕೆ ಹೋಗಲು ಆಗುತ್ತಿಲ್ಲ. ನಾಯಕತ್ವದ ದಾರಿದ್ರ ಕಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಒಬ್ಬ ವಿಧೂಷಕ. ಪೊಲಿಟಿಕಲ್ ಜೋಕರ್ ಎಂದು ಲೇವಡಿ ಮಾಡಿದರು.

ಬಿಜೆಪಿಯವರಿಗೆ ನನ್ನನು ಕಂಡರೆ ಭಯ. ಅದಕ್ಕಾಗಿ ಪದೇ ಪದೇ ನನ್ನ ಬಗ್ಗೆ ಮಾತನಾಡುತ್ತಿರುತ್ತಾರೆ. ವೈಯಕ್ತಿಕ ಟೀಕೆಗಳನ್ನು ಬಿಟ್ಟು ರಾಜಕಾರಣದಲ್ಲಿ ವಿಷಯಾಧಾರಿತವಾಗಿ ಚರ್ಚೆ ಮಾಡಬೇಕು. ಭ್ರಷ್ಟಾಚಾರ ವ್ಯಾಪಕವಾಗಿದೆ. ಅದರ ಬಗ್ಗೆ ಮಾತನಾಡಬೇಕು ಎಂದು ಕಿಡಿಕಾರಿದರು.

ರಾಜಕಾರಣ ಎಂದರೆ ಜನ ಸೇವೆ ಮಾಡುವ ಪ್ರವೃತ್ತಿ. ಆದರೆ ಬಿಜೆಪಿಯವರು ಅದನ್ನು ಲೂಟಿ ಮಾಡಲು ಇರುವ ವೃತ್ತಿ ಎಂದು ಭಾವಿಸಿದಂತಿದೆ. ಇಂತಹವರಿಗೆ ಏನೂ ಹೇಳಲು ಸಾಧ್ಯವಿಲ್ಲ. ಪಾದಯಾತ್ರೆಯ ಬಗ್ಗೆ ಸಚಿವ ಶ್ರೀರಾಮುಲು ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಹೋರಾಟ, ಚಳವಳಿಗಳ ಬಗ್ಗೆ ಗೊತ್ತಿಲ್ಲ. ರೆಡ್ಡಿ ಸಹೋದರರ ನಡುವೆ ಬೆಳೆದು ಬಂದವರು. ಈಗ ಅಂತಹವರ ಹೆಸರನ್ನು ಏಕೆ ಹೇಳುತ್ತೀರಾ ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.

Articles You Might Like

Share This Article