ದಾವಣಗೆರೆ,ಆ.3- ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ಬೆಣ್ಣೆ ನಗರಿ ದಾವಣಗೆರೆ ಸಾಕ್ಷಿಯಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಜನ್ಮದಿನ ಸಮಾರಂಭವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದರು.
ಇಲ್ಲಿನ ಶ್ಯಾಮನೂರು ಶಿವಶಂಕರಪ್ಪ ಮೈದಾನದಲ್ಲಿ ಏರ್ಪಡಿಸಿದ ಬೃಹತ್ ವೇದಿಕೆಯಲ್ಲಿ ಸಿದ್ದರಾಮಯ್ಯನವರ ವೈಭವದ ಅಮೃತ ಮಹೋತ್ಸವದಲ್ಲಿಪ ಪಾಲ್ಗೊಂಡ ಬಹುತೇಕ ಕಾಂಗ್ರೆಸ್ ನಾಯಕರು ಸಿದ್ದು ಗುಣಗಾನ ಮಾಡಿದರು. ಸಮಾರಂಭ ಆರಂಭವಾಗುತ್ತಿದ್ದಂತೆ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದವು.

ಹೌದು ಹುಲಿಯಾ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆಗಳು ಕಿವಿಗಚ್ಚಿದವು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ದಾವಣಗೆರೆಯ ದುರ್ಗಾಂಬ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ವೇದಿಕೆಗೆ ಆಗಮಿಸಿದರು.
ಈ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಅಭಿಮಾನಿಗಳು ನಿಂತು ಅವರತ್ತ ಕೈ ಬೀಸಿ ಶುಭ ಕೋರಿದರು. ಹೂಮಳೆ ಸುರಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಬಸ್ಸು, ಲಾರಿ, ವ್ಯಾನ್‍ಗಳಲ್ಲಿ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‍ಗಟ್ಟಲೇ ಟ್ರಾಫಿಕ್‍ಜಾಮ್ ಉಂಟಾಯಿತು. ಕಾಂಗ್ರೆಸ್ ಒಗ್ಗಟ್ಟಿನ ಪ್ರದರ್ಶನ ಮಾಡುವುದರ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿತು.

ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಯಿತು. 12.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ಅವರು ವೇದಿಕೆಗೆ ಆಗಮಿಸಿ ಕಾರ್ಯಕರ್ತರತ್ತ ಕೈ ಬೀಸಿದರು. ಜೈಕಾರದ ಘೋಷಣೆಗಳು ಮೊಳಗಿದವು.
ಆರ್.ವಿ.ದೇಶಪಾಂಡೆ, ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಬಿ.ಕೆ.ಹರೀಶ್, ಡಿ.ಕೆ.ಸುರೇಶ್, ಡಾ.ಅಜಯ್ ಸಿಂಗ್, ಡಾ.ಅಂಜಲಿ ನಿಂಬಾಳ್ಕರ್, ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿದರು.
ನಂತರ ಸಮಾರಂಭದ ನೇತೃತ್ವದ ವಹಿಸಿದ್ದ ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಅದ್ಭುತ ಕಾರ್ಯಕ್ರಮ ದೇಶಕ್ಕೆ ಒಂದು ಸಂದೇಶವನ್ನು ನೀಡುತ್ತಿದೆ. ಕಾಂಗ್ರೆಸ್ ಪುನಶ್ಚೇತನಕ್ಕೆ ನಾಂದಿಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಂಸ್ಕøತಿಕ ನಾಯಕತ್ವ ರಾಜ್ಯಕ್ಕೆ ಅತ್ಯಗತ್ಯವಾಗಿದೆ. ರಾಜ್ಯದಲ್ಲಿ ಕೋಮು ಸೌಹಾರ್ದತೆ ನೆಲೆಸಬೇಕು. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತೊಲಗಬೇಕು. ಅದಕ್ಕಾಗಿ ಸಿದ್ದರಾಮಯ್ಯನವರ ನಾಯಕತ್ವ ಬೇಕಾಗಿದೆ ಎಂದು ಹೇಳಿದರು.
ಅವರು ರೈತ, ಸಮಾಜವಾದಿ ಹೋರಾಟಗಳಲ್ಲಿ ಪಾಲ್ಗೊಂಡು ನಾಯಕರಾದವರು. ಸಾಮಾಜಿಕ ನ್ಯಾಯದ ಪರಿಪಾಲಕರು. 5 ವರ್ಷಗಳ ಕಾಲ ಸಮರ್ಥ ಆಡಳಿತ ನೀಡಿದವರು. ರಾಜ್ಯದ ಜನ ಅವರ ಆಡಳಿತವನ್ನು ಮತ್ತೆ ಬಯಸಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕರ್ನಾಟಕದ ಮಾಸ್ ಲೀಡರ್ ಸಿದ್ದರಾಮಯ್ಯನವರು ಹೋರಾಟಗಳಲ್ಲಿ ಬೆಳೆದು ಬಂದವರು. ಅವರು ನಮಗೆ ಒಂದು ಶಕ್ತಿ. ಇಲ್ಲಿನ ಜನಸ್ತೋಮ ಈ ಶಕ್ತಿಯ ಪ್ರತಿರೂಪವಾಗಿದೆ ಎಂದರು.
ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದೆಲ್ಲದಕ್ಕೂ ಕಾಂಗ್ರೆಸ್ ಪರಿಹಾರ. ಮುಂಬರುವ ದಿನಗಳಲ್ಲಿ ಜನ ಕಾಂಗ್ರೆಸ್‍ನ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಹೇಳಿದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಘಟನೆಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಜನವಿರೋ ಬಿಜೆಪಿಯನ್ನು ಜನ ತೊಲಗಿಸಬೇಕಾದ ಅಗತ್ಯವಿದೆ. ಜನಪರವಾದ ಕಾಂಗ್ರೆಸ್‍ನ್ನು ಅಕಾರಕ್ಕೆ ತರಬೇಕು ಎಂದು ಹೇಳಿದರು.
ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ರೆಹಮಾನ್ ಖಾನ್, ಡಾ.ಜಿ.ಪರಮೇಶ್ವರ್, ದಿನೇಶ್‍ಗುಂಡೂರಾವ್, ವೀರಪ್ಪ ಮೊಯ್ಲಿ, ಎಚ್.ಕೆ.ಪಾಟೀಲ್, ಕೆ.ಆರ್.ರಮೇಶ್‍ಕುಮಾರ್, ಎಚ್.ಎಂ.ರೇವಣ್ಣ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ ಮೋಟಮ್ಮ, ರಾಣಿ ಸತೀಶ್, ಉಮಾಶ್ರೀ, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್, ಸಲೀಂ ಮೊಹಮ್ಮದ್, ಬಸವರಾಜರಾಯ ರೆಡ್ಡಿ ಹಲವು ಮುಖಂಡರು ಮಾತನಾಡಿ ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗ್ಗೆ ಕಾಂಗ್ರೆಸ್ ಪಕ್ಷ ಸಂಘಟನಾತ್ಮಕ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಸಂಘಟನೆ, ಚುನಾವಣೆಗೆ ಪಕ್ಷದ ತಯಾರಿಯ ಬಗ್ಗೆ ಸಲಹೆಗಳನ್ನು ನೀಡಿದ ಅವರು ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಕಿಡಿಕಾರಿದರು.
ಅಮೃತೋತ್ಸವ ಸಮಿತಿ ವತಿಯಿಂದ ಸಿದ್ದರಾಮಯ್ಯನವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಸಿದ್ದರಾಮಯ್ಯನವರ ಕುರಿತ ಸಮರ ಸೇನಾನಿ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.