ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಸಿದ್ದುಗೆ ಮುಗುಬಿದ್ದ ಕಾರ್ಯಕರ್ತರು

Social Share

ಬೆಂಗಳೂರು, ಫೆ.14- ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಮತ್ತೆ ಸ್ಪರ್ಧೆ ಮಾಡಬೇಕು ಎಂದು ಸಾವಿರಾರು ಮಂದಿ ಅಭಿಮಾನಿಗಳು, ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಒತ್ತಾಯಿಸಿದ್ದಾರೆ.

ಬಾದಾಮಿಯಿಂದ ಸುಮಾರು 250ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.ಬಾದಾಮಿಯಿಂದ ಮೂರನೇ ಬಾರಿ ಕಾರ್ಯಕರ್ತರು ಬೆಂಗಳೂರಿಗೆ ಬಂದು ಸಿದ್ದರಾಮಯ್ಯಗೆ ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಬದಲಾವಣೆ ಮಾಡಬೇಕು. ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ.

ಇದೇ ರೀತಿ ವರುಣ ಕ್ಷೇತ್ರದ ಜನರಿಂದ ಒತ್ತಡ ಬಂದಿದೆ. ಕಳೆದ ವಾರ ಚಾಮುಂಡೇಶ್ವರಿ ಕ್ಷೇತ್ರದ ಜನರಿಂದ ಒತ್ತಡ ಬಂದಿತ್ತು.ಇಂದು ಬೆಳಗ್ಗೆ ಸಿದ್ದರಾಮಯ್ಯ ನಿವಾಸದ ಬಳಿ ಆಗಮಿಸುತ್ತಿರುವ ಬಾದಾಮಿ ಹಾಗೂ ವರುಣ ಕ್ಷೇತ್ರದ ಜನ ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ನಿವಾಸದ ಬಳಿ ಬೆಂಬಲಿಗರು ಬಾದಾಮಿಗೆ ಬರಬೇಕು ಎಂದು ಘೋಷಣೆ ಕೂಗಿದ್ದಾರೆ. ಬರ್ಬೆಕಪ್ಪ ಬರ್ಬೇಕು – ಬಾದಾಮಿಗೆ ಬರ್ಬೇಕು ಎಂದು ಘೋಷಣೆ ಕೂಗಿದ್ದಾರೆ.ಮಹಿಳೆಯೊಬ್ಬರು ಅಳುತ್ತಾ ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಬರಬೇಕು ಎಂದು ಬೇಡಿಕೊಂಡಿದ್ದಾರೆ.

ಬಾದಾಮಿಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸುವಂತೆ ಕಾರ್ಯಕರ್ತರು ಸಿದ್ದರಾಮಯ್ಯ ಮನೆಯ ಬಳಿ ಅಡ್ಡಲಾಗಿ ಕುಳಿತು ಒತ್ತಾಯಿಸಿದರು. ಸಿದ್ದರಾಮಯ್ಯ ಹೊರಹೋಗದಂತೆ ತಡೆ ಹಿಡಿದರು. ಕಾರಿಗೆ ಅಡ್ಡ ಕುಳಿತು ಪ್ರತಿಭಟನೆ ನಡೆಸಿದರು.

ಇದರಿಂದ ಸಿದ್ದರಾಮಯ್ಯ ಅವರ ನಿವಾಸ ಬಳಿ ನೂಕು ನುಗ್ಗಲು ಉಂಟಾಯಿತು. ಹಾಗೂ ಹೀಗೂ ದಾರಿ ಮಾಡಿಕೊಂಡು ಸಿದ್ದರಾಮಯ್ಯ ಕಾರಿನಲ್ಲಿ ತೆರಳುವಾಗ ಕೆಲ ಕಾರ್ಯಕರ್ತರು ಕಾರಿನ ಹಿಂದೆ ಓಡಿ ಕ್ಷೇತ್ರದಕ್ಕೆ ಬನ್ನಿ ಎಂದು ಒತ್ತಡ ಹಾಕಿದರು.

ಬಾದಾಮಿ ಕ್ಷೇತ್ರಕ್ಕೆ ಬಾರದೇ ಹೋದರೆ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ, ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದರು.ಆದರೆ ಸಿದ್ದರಾಮಯ್ಯ ಯಾವುದಕ್ಕೂ ಪ್ರತಿಕ್ರಿಯಿಸದೆ ವಿಧಾನಸಭೆ ಕಲಾಪದತ್ತ ಹೊರಟರು.

#Siddaramaiah, #Activists, #contest, #Badami,

Articles You Might Like

Share This Article