ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಮೊಟ್ಟೆ ಎಸೆತ ಪ್ರಕರಣ

Social Share

ಬೆಂಗಳೂರು,ಆ.22- ರಾಜ್ಯ ರಾಜಕಾರಣದಲ್ಲಿ ಹೊತ್ತಿಕೊಂಡಿರುವ ಮೊಟ್ಟೆ ಎಸೆತ ಹಾಗೂ ಮಾಂಸ ಸೇವನೆ ಪ್ರಕರಣ ಮತ್ತಷ್ಟು ವಿವಾದ ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಪ್ರಕರಣವನ್ನು ಎರಡೂ ಪಕ್ಷಗಳು ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಕಸರತ್ತು ನಡೆಸುತ್ತಿವೆ.

ಚುನಾವಣಾ ವರ್ಷ ಆಗಿರುವುದರಿಂದ ಪ್ರಕರಣವನ್ನು ಜೀವಂತವಾಗಿಟ್ಟಷ್ಟು ಮತ ಗಳಿಕೆ ಹೆಚ್ಚಾಗುತ್ತದೆ ಎಂಬುದು ಎರಡೂ ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಚಲಿಸುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ಯಾವ ರಾಜಕೀಯ ಪಕ್ಷದ ಕಾರ್ಯಕರ್ತ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ಪ್ರಕರಣ ದಿನಕ್ಕೊಂದು ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.

ನನಗೂ, ಸಂಪತ್ತಿಗೂ ಸಂಬಂಧವಿಲ್ಲ. ಆತನ ಜೊತೆಗಿರುವ ಒಂದೇ ಒಂದು ಫೋಟೊ ಬಿಡುಗಡೆ ಮಾಡಿ ಎಂದು ಮಾಜಿ ಸಚಿವ ಜೀವಿಜಯ ಬಿಜೆಪಿಯವರಿಗೆ ಸವಾಲು ಎಸೆದಿದ್ದರು. ಈ ಸವಾಲು ಹಾಕಿದ್ದ ಮರುಕ್ಷಣವೇ ಬಿಜೆಪಿಯವರು ಸಂಪತ್ ವಿವಾಹ ಸಮಾರಂಭಕ್ಕೆ ಜೀವಿಜಯ ಅವರು ಆಗಮಿಸಿ ಶುಭಕೋರಿದ ಫೋಟೋವನ್ನು ಬಿಜೆಪಿ ಸಾಕ್ಷಿ ಸಮೇತ ಬಿಡುಗಡೆ ಮಾಡಿದೆ.

ಮತ್ತೊಂದೆಡೆ ಬಿಜೆಪಿಯ ಕಾರ್ಯಕರ್ತರು ಮಡಿಕೇರಿಯಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಪ್ರಯತ್ನ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಸೋಮವಾರವೂ ಎರಡೂ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ಅಲ್ಲಲ್ಲಿ ಪ್ರತಿಭಟನೆ, ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರು ವೀರಸಾರ್ವಕರ್ ಫೋಟೋ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಿಜೆಪಿಯವರು ಬೀದಿಗಿಳಿದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಲಾಭ-ನಷ್ಟ ಲೆಕ್ಕಾಚಾರ: ಇನ್ನು ಇದೇ 26ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಕ್ತಿ ಪ್ರದರ್ಶಿಸಲು ಮುಂದಾಗಿವೆ. ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು, ಮೈಸೂರಿನಿಂದ ಮಡಿಕೇರಿ ಚಲೋ ಹಮ್ಮಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಅಂದೇ ಸ್ವಾಭಿಮಾನಿ ಸಮಾವೇಶ ನಡೆಸಲು ಮುಂದಾಗಿದೆ.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜಯಂತಿ ಉತ್ಸವದಂತೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾಂಗ್ರೆಸ್, ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ, ಪದಾಧಿಕಾರಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಕಾರ್ಯಕರ್ತರನ್ನು ಸೇರಿಸಲು ಮುಂದಾಗಿದೆ.

ಕಾಂಗ್ರೆಸ್‍ಗೆ ತನ್ನ ಜಿಲ್ಲೆಯಲ್ಲಿ ಠಕ್ಕರ್ ಕೊಡಲು ಮುಂದಾಗಿರುವ ಬಿಜೆಪಿ ಕೂಡ ಮಡಿಕೇರಿ, ಮೈಸೂರು, ಚಾಮರಾಜನಗರದಿಂದಲೂ ಕಾರ್ಯಕರ್ತರನ್ನು ಸೇರಿಸಿ ಸೇರಿಗೆ ಸವಾಸೇರು ಎಂಬಂತೆ ಶಕ್ತಿ ಪ್ರದರ್ಶಿಸಲು ಮುಂದಾಗಿದೆ.

ಮುಂದುವರೆದ ವಾಕ್ಸಮರ: ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಮುಂದುವರೆದಿದೆ. ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮತ್ತಿತರರು ತೀವ್ರ ಕಿಡಿಕಾರಿದ್ದಾರೆ.

ಇತ್ತ ಬಿಜೆಪಿ ಕೂಡ ಕೈ ನಾಯಕರ ವಿರುದ್ಧ ಪ್ರತಿದಾಳಿ ನಡೆಸಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟಿದ್ದಾರೆ. ಈ ಬೆಳವಣಿಗೆಗಳ ನಡುವೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಎರಡು ರಾಷ್ಟ್ರೀಯ ಪಕ್ಷಗಳಿಗೆ ಶಾಂತಿ ಸಂಧಾನದ ಹಿತೋಪದೇಶ ಮಾಡಿದ್ದಾರೆ.

ಕಾಂಗ್ರೆಸ್ ಕಚೇರಿಗೆ ಸಾರ್ವಕರ್ ಫೋಟೋ: ರಾಜ್ಯದ ಹಲವೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಬ್ಯಾನರ್, ಫ್ಲೆಕ್ಸ್ ಗಲಾಟೆಗಳು ಮುಂದುವರೆದಿದೆ. ಇದೀಗ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವೀರ ಸಾವರ್ಕರ್ ಫೋಟೋ ಅಂಟಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ತಡರಾತ್ರಿ ಹತ್ತಾರು ಸಾವರ್ಕರ್ ಫೋಟೋಗಳನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆ, ಬಾಗಿಲಿಗೆ ಅಂಟಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ, ಕೂಡಲೇ ಆರೋಪಿಗಳನ್ನು ಬಂಸಬೇಕು, ಇಲ್ಲವಾದರೆ ಬಿಜೆಪಿ ಕಚೇರಿಗೆ ನಮ್ಮ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಫೋಟೋ ಅಂಟಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Articles You Might Like

Share This Article