ಬೆಂಗಳೂರು,ಜ.1- ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿದೆ. ಕಳೆದ ನಾಲ್ಕು ದಿನಗಳಿಂದ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳ ಆರೋಗ್ಯ ಸ್ಥಿತಿ ಭಾನುವಾರಕ್ಕಿಂತಲೂ ಕೊಂಚ ಸುಧಾರಿಸಿದ್ದು, ಭಕ್ತರು ಯಾವುದೇ ವದಂತಿ ಸುದ್ದಿಗಳನ್ನು ನಂಬಬಾರದು ಎಂದು ವೈದ್ಯರು ಮನವಿ ಮಾಡಿದ್ದಾರೆ.
ಶ್ರೀಗಳ ಬಿಪಿ, ನಾಡಿಮಿಡಿತ ಎಲ್ಲವೂ ಸಹಜವಾಗಿದ್ದು, ಗಂಜಿ, ನೀರು ಸೇವನೆ ಮಾಡುತ್ತಿದ್ದಾರೆ. ಅವರಿಗೆ ದ್ರವರೂಪದ ಆಹಾರಗಳನ್ನು ಮಾತ್ರ ನೀಡಲಾಗುತ್ತಿದೆ. ಘಟ್ಟಿ ಪ್ರಮಾಣದ ಆಹಾರವನ್ನು ನೀಡುತ್ತಿಲ್ಲ. ಕೆಲವರನ್ನು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಭಕ್ತರು ಆತಂಕಕ್ಕೆ ಒಳಗಾಗಬಾರದೆಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಎಸ್.ಬಿ.ಪಾಟೀಲ್ ಹೇಳಿದ್ದಾರೆ.
ವಿಜಾಪುರದ ಬಿಎಲ್ಡಿ ಸಂಸ್ಥೆಯ ತಜ್ಞ ವೈದ್ಯರ ತಂಡ ಸಿದ್ದೇಶ್ವರ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಶನಿವಾರ ಮತ್ತು ಭಾನುವಾರಕ್ಕೆ ಹೋಲಿಸಿದರೆ ತುಸು ಮಟ್ಟಿಗೆ ಶ್ರೀಗಳ ಚೇತರಿಕೆ ಕಂಡಿದೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲೇ ರಾಜ್ಯದಲ್ಲಿ BF.7 ವೈರಸ್ ಪತ್ತೆಯಾಗಿತ್ತು..!
ಭಾನುವಾರ ರಾತ್ರಿಯಿಂದ ಗಂಜಿ, ಎಳನೀರು ಸೇವನೆ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯೂ ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಅವರ ಚಿರಪರಿಚಿತರನ್ನು ಗುರುತು ಹಿಡಿದು ಮಾತನಾಡಿಸುತ್ತಿದ್ದಾರೆ. ಸಾವಿರಾರು ಭಕ್ತರ ಆರೈಕೆ, ಪೂಜೆ ಫಲವಾಗಿ ಶ್ರೀಗಳ ಆರೋಗ್ಯ ಸುಧಾರಿಸಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಅವರ ಅಂಗಾಂಗಗಳಲ್ಲಿ ಯಾವುದೇ ರೀತಿಯ ವೈಫಲ್ಯ ಕಂಡುಬಂದಿಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲೇ ಇವೆ. ಚಿಕಿತ್ಸೆಗೂ ಶ್ರೀಗಳು ಸ್ಪಂದಿಸುತ್ತಿರುವುದರಿಂದ ಬೇಗ ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.
ಮುಂದುವರೆದ ಪೂಜೆಪುನಸ್ಕಾರ:
ಸಿದ್ದೇಶ್ವರ ಶ್ರೀಗಳು ಶೀಘ್ರವಾಗಿ ಗುಣಮುಖರಾಗಲೆಂದು ಮಠದ ಹೊರಭಾಗದಲ್ಲಿ ಸಾವಿರಾರು ಭಕ್ತರು ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿದ್ದಾರೆ. ಶ್ರೀಗಳನ್ನು ನೋಡಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಮಠದ ಸುತ್ತಮುತ್ತ ಭಾರೀ ಪೆಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾತ್ರಿ ಪೂರ್ತಿ ಮಠದ ಆವರಣದಲ್ಲಿಯೇ ಬೀಡು ಬಿಟ್ಟಿರುವ ಭಾರೀ ಸಂಖ್ಯೆಯ ಭಕ್ತರು ಶ್ರೀಗಳ ದರ್ಶನಕ್ಕೆ ಕಾಯುತ್ತಿದ್ದಾರೆ.
ನಾವು ಅವರನ್ನು ನೋಡದೆ ಜಾಗಬಿಟ್ಟು ಕದಲುವುದಿಲ್ಲ. ನಡೆದಾಡುವ ದೇವರನ್ನು ನೋಡಬೇಕೆಂದು ಶ್ರೀಗಳ ಭಕ್ತರು ಪಟ್ಟು ಹಿಡಿದಿದ್ದಾರೆ. ಶೀಘ್ರ ಗುಣಮುಖರಾಗಲೆಂದು ಅಲ್ಲಲ್ಲಿ, ಪೂಜೆ ಪುನಸ್ಕಾರ, ಹೋಮಹವನಗಳನ್ನು ಮಾಡಲಾಗುತ್ತಿದೆ. ವಿಜಾಪುರ ಜಿಲ್ಲೆಯ ತಿಕೋಟ ತಾಲ್ಲೂಕಿನ ಬಿಜ್ಜಂಗಿ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಭಕ್ತರು ಬೆಳಗ್ಗಿನಿಂದಲೇ ಶ್ರೀಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ದಾಳಿ, 14 ಮಂದಿ ಸಾವು, 24 ಕೈದಿಗಳು ಪರಾರಿ
ನಮ್ಮ ದೇವರು ಬೇಗ ಗುಣಮುಖರಾಗಲಿ. ಅವರನ್ನು ನೋಡುವ ಸೌಭಾಗ್ಯ ನಮ್ಮದಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇನ್ನು ಮಠದಲ್ಲಿ ಜಮಾವಣೆಗೊಂಡಿರುವ ಭಕ್ತರ ಮನವೊಲಿಸುವುದೇ ಪೊಲೀಸರಿಗೆ ದುಸ್ಸಾಹಸವಾಗಿದೆ.
ಗಣ್ಯರ ಭೇಟಿ: ಇನ್ನು ಸಿದ್ದೇಶ್ವರ ಸ್ವಾಮಿಗಳ ಭೇಟಿಗೆ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ಮತ್ತಿತರರು ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಮತ್ತಿತರರು ಗಣ್ಯರು ಆಗಮಿಸಿ ಶ್ರೀಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
Siddheshwar Swamiji, Health, condition,