ಬೆಂಗಳೂರು, ಫೆ.02: ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ನಾಲ್ಕು ಡಿಜಿಟ್‌ಗೆ ತಲುಪಿರುವುದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.ದಿನದಿಂದ ದಿನಕ್ಕೆ ರೇಷ್ಮೆಗೂಡಿನ ದರ ಏರಿಕೆಯಾಗುತ್ತಲ್ಲಿದ್ದು, ಒಂದು ಕೆಜಿ ರೇಷ್ಮೆಗೂಡಿನ ಒಂದು ಸಾವಿರ ರೂಪಾಯಿ ಗಡಿದಾಟಿದೆ. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಇಂದು ದಾಖಲೆ ಮಟ್ಟದಲ್ಲಿ ರೇಷ್ಮೆ ಗೂಡ ಹರಾಜಾಗಿದ್ದು, ಒಂದು ಕೆಜಿ ರೇಷ್ಮೆಗೂಡು ಬರೋಬ್ಬರಿ 1043 ರೂಪಾಯಿಗೆ ಮಾರಾಟವಾಗಿದೆ.
ರೇಷ್ಮೆ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳಿಗೆ ಕಡಿವಾಣ, ಮಾರುಕಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಕಿರುಕುಳಕ್ಕೆ ಬ್ರೇಕ್, ರೇಷ್ಮೆಗೂಡು ಕದಿಯುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ, ಇ- ಪೆಮೆಂಟ್ ವ್ಯವಸ್ಥೆ ಜಾರಿ ಸೇರಿದಂತೆ ಸಚಿವ ಡಾ.ನಾರಾಯಣಗೌಡ ಅವರು ತೆಗೆದುಕೊಂಡ ಹಲವು ದಿಟ್ಟ ಕ್ರಮಗಳ ಪರಿಣಾಮವಾಗಿ ಇಂದು ದಾಖಲೆ ದರಕ್ಕೆ ರೇಷ್ಮೆ ಗೂಡು ಮಾರಾಟವಾಗುವ ಮೂಲಕ ರೈತರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ.
ರೇಷ್ಮೆ ದರ ಸರಾಸರಿ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 2020-21 ನೇ ಸಾಲಿನಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ ಸರಾಸರಿ 300 ರೂಪಾಯಿ ಇತ್ತು. 2021 ಸಾಲಿನ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ 700-800 ರೂ.ನಷ್ಟಿತ್ತು. ಆದರೆ ಇವತ್ತು 1043 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ.
# ರೈತನ ಮಗನಾಗಿ, ರೇಷ್ಮೆ ಬೆಳೆಗಾರನಾಗಿದ್ದ ನನಗೆ ಸಾರ್ಥಕ ಕ್ಷಣ: ಸಚಿವ ಡಾ.ನಾರಾಯಣಗೌಡ :
ಪ್ರತಿ ಕೆಜಿ ಗೂಡಿಗೆ ಸಾವಿರದ ರೂಪಾಯಿ ಗಡಿ ದಾಟಿರುವುದು ರೇಷ್ಮೆ ಬೆಳೆಗಾರರಿಗೆ ಸಂತೋಷವನ್ನು ತಂದಿದೆ. ಇಂದು ರಾಮನಗರ ಮಾರುಕಟ್ಟೆಯಲ್ಲಿ ಒಂದು ಕೆಜಿ ರೇಷ್ಮೆ ಗೂಡು 1043 ರೂ.ಗೆ ಮಾರಾಟವಾಗಿದೆ. ಇದು ರೇಷ್ಮೆ ಬೆಳೆಗಾರರಲ್ಲಿ ಮತ್ತಷ್ಟು ಹುಮ್ಮಸ್ಸು ತರಿಸಿದ್ದು, ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಬೆಳೆಯಲು ಇದು ಸಹಕಾರಿಯಾಗಲಿದೆ.
ರೇಷ್ಮೆ ಮಾರುಕಟ್ಟೆಗಳಲ್ಲಿ ಆಗುತ್ತಿದ್ದ ಭ್ರಷ್ಟಾಚಾರ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿರುವ ಪರಿಣಾಮದಿಂದ ರೇಷ್ಮೆ ಗೂಡಿನ ಗುಣಮಟ್ಟಕ್ಕೆ ತಕ್ಕಂತೆ ನೈಜ ಬೆಲೆ ಸಿಗುತ್ತಿದೆ. ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡ ಪರಿಣಾಮದಿಂದ ರೇಷ್ಮೆ ಗೂಡಿನ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯಿತ್ತು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ರೇಷ್ಮೆ ಬೆಳೆಗಾರರ ಜೊತೆ ನಮ್ಮ ಸರ್ಕಾರ ಇದೆ. ರೇಷ್ಮೆ ಬೆಳೆಗಾರರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಹಾಗೂ ಗುಣಮಟಕ್ಕೆ ತಕ್ಕಂತೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇನೆ. ರೇಷ್ಮೆ ಗೂಡು ದರ ನಾಲ್ಕು ಡಿಜಿಟ್‌ಗೆ ತಲುಪಿರುವುದು ಮತ್ತಷ್ಟು ರೈತರು ರೇಷ್ಮೆ ಬೆಳೆಯುವುದಕ್ಕೆ ಪ್ರೇರಣೆಯಾಗಲಿದೆ ಎಂದು ಸಚಿವ ಡಾ.ನಾರಾಯಣ ಗೌಡ ಅವರು ತಿಳಿಸಿದ್ದಾರೆ.
# ಬಿಡ್ಡಿಂಗ್ ತಂತ್ರಾಂಶ ನವೀಕರಣ :
ಕಷ್ಟಪಟ್ಟು ರೇಷ್ಮೆ ಬೆಳೆಯುವ ರೈತರಿಗೆ ನೈಜ ಬೆಲೆ ಸಿಗಬೇಕು ಎಂಬುವುದು ಸಚಿವ ಡಾ.ನಾರಾಯಣ ಗೌಡ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇಲಾಖೆಯಲ್ಲಿ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದರು.
ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ನಾಲ್ಕು ಡಿಜಿಟ್‌ಗೆ ತಲುಪುವ ನಿರೀಕ್ಷೆ ಇಲಾಖೆಗೆ ಇತ್ತು. ಹಾಗಾಗಿ, ಕೇವಲ ಮೂರು ಡಿಜಿಟ್ ಹೊಂದಿದ್ದ ಬಿಡ್ಡಿಂಗ್ ತಂತ್ರಾಂಶವನ್ನು ಅಪ್ಡೇಟ್ ಮಾಡಲಾಗಿತ್ತು. ತಂತ್ರಾಂಶ ನವೀಕರಿಸಿರುವುದರಿಂದ ನಾಲ್ಕು ಡಿಜಿಟ್‌ನಲ್ಲಿ ಬಿಡ್ಡಿಂಗ್ ಮಾಡಲು ಸಹಕಾರಿಯಾಗಿದೆ.