BREAKING NEWS : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ..!

Social Share

ಮುಂಬೈ, ಫೆ.6- ಭಾರತೀಯ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರು ಇಂದು ವಿವಶರಾಗಿದ್ದಾರೆ.ತಮ್ಮ ಸಿರಿಕಂಠದಿಂದ ಭಾರತೀಯ ಚಿತ್ರರಂಗದಲ್ಲಿ 36 ಭಾಷೆಗಳಲ್ಲಿ ಹಾಡಿದ್ದ ಅವರ ಹಾಡು ಸ್ತಬ್ಧಗೊಂಡಿದೆ.ತಮ್ಮ 13ನೆ ವಯಸ್ಸಿನಲ್ಲೇ ಗಾಯನ ಆರಂಭಿಸಿದ್ದ ಲತಾ ಅವರು ಸುಮಾರು ಏಳು ದಶಕಗಳ ಕಾಲ ಭಾರತದ ಮಧುರ ಕಂಠದ ಗಾಯಕಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
1929ರ ಸೆಪ್ಟೆಂಬರ್ 28ರಂದು ಮಧ್ಯ ಪ್ರದೇಶದ ಇಂದೋರ್‍ನಲ್ಲಿ ಸಂಗೀತಗಾರ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ಅವರ ಪುತ್ರಿಯಾಗಿ ಜನಿಸಿದ ಲತಾ ಅವರ ಮೊದಲ ಹೆಸರು ಹೇಮಾ.ಬಾಲ್ಯದಲ್ಲೇ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಲತಾ ಅವರಿಗೆ ಅವರ ತಂದೆಯೇ ಮೊದಲ ಗುರು. ಅವರಲ್ಲಿದ್ದ ಅಸಾಧಾರಣ ಪ್ರತಿಭೆಗೆ ನೀರೆರೆದು ಪೋಷಿಸಿದ್ದರು.
ಮುಂಬೈನ ಪ್ರತಿಷ್ಠಿತ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲತಾ ಕೊನೆಯುಸಿರೆಳೆದಿದ್ದಾರೆ.ಜನವರಿ 8ರಂದು ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಡ್ಜ್‍ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜನವರಿ 3ರಂದು ಕೋವಿಡ್‍ನಿಂದ ಹೊರಬಂದಿದ್ದರು.
ಗಾಯನ ಲೋಕದ ದಂತಕತೆ ಎನಿಸಿದ್ದ ಲತಾ ಅವರು ಕಳೆದ ವಾರ ಚೇತರಿಸಿಕೊಂಡಿದ್ದರು. ಆದರೆ, ನಿನ್ನೆ ಮತ್ತೆ ಆರೋಗ್ಯ ಹದಗೆಟ್ಟಿದ್ದರಿಂದ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಯಿತು.ಅವರ ಮೊದಲು 1948ರಲ್ಲಿ ಮಜಬೂರ್ ಎಂಬ ಚಿತ್ರದ ದಿಲ್‍ಮೆರಾ ಥೋಡಾ ಎಂಬ ಚಿತ್ರಗೀತೆಯಿಂದ ಪಾದಾರ್ಪಣೆ ಮಾಡಿದರೂ 1949ರಲ್ಲಿ ಹಾಡಿದ ಆಯೆಗಾ ಆನೆವಾಲಾ ಎಂಬ ಮಹಲ್ ಚಿತ್ರದಿಂದ ಜನಪ್ರಿಯತೆ ಗಳಿಸಿದರು.
ಅಲ್ಲಿಂದ ಹಿಂದಿರುಗಿ ನೋಡದ ಲತಾ ಅವರು, ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅಪ್ರತಿಮೆ ಗಾಯಕಿಯಾಗಿ ಬೆಳೆದರು.
ಅವರ ಅದೆಷ್ಟೋ ಹಾಡುಗಳು ಜನಪ್ರಿಯವಾಗಿ ಚಿತ್ರರಂಗದ ಅಮರಗೀತೆಗಳಾಗಿ ಉಳಿದಿವೆ.
36 ಭಾಷೆಗಳಲ್ಲಿ ಒಟ್ಟು 30 ಸಾವಿರಕ್ಕೂ ಅಕ ಹಾಡುಗಳನ್ನು ಹಾಡಿರುವ ಲತಾ ಅವರು ಹಿಂದಿ ಭಾಷೆಯೊಂದರಲ್ಲೇ 1000ಕ್ಕೂ ಹೆಚ್ಚು ಹಾಡು ಹಾಡಿ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 1989ರಲ್ಲಿ, ಪದ್ಮವಿಭೂಷಣ ಪ್ರಶಸ್ತಿಯನ್ನು 1999ರಲ್ಲಿ ಹಾಗೂ 2001ರಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾದವರು. ಇದಲ್ಲದೆ, ನ್ಯಾಷನಲ್ ಫಿಲ್ಮ್‍ಫೇರ್ ಅವಾರ್ಡ್, ಜೀವಮಾನ ಸಾಧನೆ ಪುರಸ್ಕಾರದಂತಹ ಹತ್ತು-ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಕೈಬೀಸಿ ಕರೆದಿವೆ.
# ಪ್ರಶಸ್ತಿಗಳು : 
# 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ).
#ಭಾರತರತ್ನ
#ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು
#ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ
#ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್
#ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
#ಪದ್ಮಭೂಷಣ
#ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿ
# ಲತಾ ಮಂಗೇಶ್ಕರ್ ನಿಧನಕ್ಕೆ ಗಣ್ಯರ ಕಂಬನಿ
* ಪ್ರಧಾನಿ ನರೇಂದ್ರ ಮೋದಿ:
ಲತಾ ದೀದಿ ಅವರ ನಿರ್ಗಮನದಿಂದ ಎಲ್ಲ ಭಾರತೀಯರೊಂದಿಗೆ ನನಗೂ ತೀವ್ರ ದುಃಖವಾಗಿದೆ. ಲತಾ ಅವರು ಯಾರೂ ತುಂಬಲಾಗದ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ. ಸಾಟಿಯಿಲ್ಲದ ಮಧುರ ಧ್ವನಿಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಲತಾ ಅವರು ಭಾರತೀಯ ಸಂಸ್ಕøತಿಯ ಹಿರಿಮೆ ಎತ್ತಿ ಹಿಡಿದಿರುವುದನ್ನು ಮುಂದಿನ ಪೀಳಿಗೆ ಜನರು ಸ್ಮರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.
* ರಾಷ್ಟ್ರಪತಿ ರಾಮನಾಥ್ ಕೋವಿಂದ್:
ಜಗತ್ತಿನಾದ್ಯಂತದ ಮಿಲಿಯಾಂತರ ಜನರಂತೆಯೇ ನನಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನ ವ್ಯಥೆಯನ್ನುಂಟುಮಾಡಿದೆ. ಲತಾ ಅವರ ದಿವ್ಯವಾಣಿ ಸ್ತಬ್ಧವಾಗಿರಬಹುದು. ಆದರೆ, ಅವರ ಕಂಠ ಮಾಧುರ್ಯ ಅಮರವಾಗಿರುತ್ತದೆ. ಶಾಶ್ವತವಾಗಿ ಅನುರಣಿಸುತ್ತಿರುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ ಮಾಡಿದ್ದಾರೆ.
* ರಾಹುಲ್ ಗಾಂಧಿ :
ಗಾಯನ ಕ್ಷೇತ್ರದ ದಂತಕಥೆ ಎನಿಸಿದ್ದ ಲತಾ ಮಂಗೇಶ್ಕರ್ ಅವರ ನಿಧನದಿಂದ ದುಃಖವಾಗಿದೆ. ಅವರ ಸ್ವರ್ಣಕಂಠ ಅಮರ. ಅದು ಅವರ ಅಭಿಮಾನಿಗಳ ಹೃದಯದಲ್ಲಿ ಮಾರ್ದನಿಸುತ್ತಲೇ ಇರುತ್ತದೆ ಎಂದು ಕಾಂಗ್ರೆಸ್ ಧುರೀಣ ರಾಹುಲ್‍ಗಾಂಧಿ ಅವರು ಟ್ವಿಟ್ಟರ್‍ನಲ್ಲಿ ಕಂಬನಿ ಮಿಡಿದಿದ್ದಾರೆ.
* ಅಮಿತ್ ಷಾ:
ಲತಾ ಮಂಗೇಶ್ಕರ್ ಅವರ ನಿಧನ ನನಗೆ ವೈಯಕ್ತಿಕ ನಷ್ಟ. ಅವರ ಸಮ್ಮೋಹಕ ಧ್ವನಿ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದಾದ್ಯಂತ ಪ್ರತಿಯೊಂದು ಪೀಳಿಗೆಗೂ ಜೀವ ತುಂಬುವಂತಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ನುಡಿದಿದ್ದಾರೆ. ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಲತಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಹಲವಾರು ಸಚಿವರು ಲತಾ ಅವರ ನಿರ್ಗಮನಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಲಿವುಡ್, ಬಾಲಿವುಡ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬಂಗಾಳಿ ಚಿತ್ರರಂಗದ ಅನೇಕ ಗಣ್ಯರು ಲತಾ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

Articles You Might Like

Share This Article