ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಸಚಿವ ಬಿ.ಸಿ ಪಾಟೀಲ್

Social Share

ಬೆಂಗಳೂರು,ಅ.19- ರೈತರ ಸಿರಿಧಾನ್ಯ ಬೆಳೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಜನವರಿ 20ರಿಂದ 22ರವರೆಗೆ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ಸಿರಿಧಾನ್ಯ ಬೆಳೆಯಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಉತ್ಪಾದನೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಇದರ ಮಾರುಕಟ್ಟೆ ವಿಸ್ತರಣೆ ರೈತರ ಬೆಳೆಗೆ ಸೂಕ್ತ ಬೆಲೆ ನೀಡುವುದು ಸೇರಿದಂತೆ ಮತ್ತಿತರ ಸದುದ್ದೇಶಕ್ಕಾಗಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರಸಚಿವ ಮಹೇಂದ್ರ ಸಿಂಗ್ ಥೋಮರ್ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಸಿರಿಧಾನ್ಯ ಮೇಳಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸಿದರೆ ಹೆಚ್ಚಿನ ಪ್ರಚಾರ ಸಿಗಲಿದೆ. ಹೀಗಾಗಿ ಅವರನ್ನು ಆಹ್ವಾನಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಸಿಎಂ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಈ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಪ್ರತಿದಿನ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ರೈತರು ಭಾಗಿಯಾಗುವ ಸಾಧ್ಯತೆ ಇದೆ. ಕೃಷಿ ವಿವಿಗಳ ಉಪಕುಲಪತಿಗಳು, ವಿವಿಧ ವಿಭಾಗದ ಮುಖ್ಯಸ್ಥರು, ಮಾದರಿ ರೈತರು ಸೇರಿದಂತೆ ಮತ್ತಿತರರನ್ನು ಆಹ್ವಾನಿಸುತ್ತೇವೆ ಎಂದು ಮಾಹಿತಿ ನೀಡಿದರು.

ಪ್ರಸಕ್ತ ವರ್ಷ ಮುಂಗಾರಿನಲ್ಲಿ 82.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಇದರಲ್ಲಿ 80.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗುರಿ ಸಾಧಿಸಿದ್ದೇವೆ. ಹಿಂಗಾರಿನಲ್ಲಿ 26.68 ಲಕ್ಷ ಹೆಕ್ಟೇರ್ ಪೈಕಿ 2.25 ಲಕ್ಷ ಹೆಕ್ಟೇರ್ ಗುರಿ ಸಾಧಿಸಲಾಗಿದೆ.

ರಾಜ್ಯದಲ್ಲಿ ಈ ಬಾರಿ ಅನೇಕ ಜಿಲ್ಲೆಗಳಲ್ಲಿ ವ್ಯಾಪಕವಾದ ಮಳೆಯಾಗಿದೆ. ಆದರೂ ಆಹಾರ ಉತ್ಪಾದನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು. ಗುಲ್ಬರ್ಗದಲ್ಲಿ ತೊಗರಿ ಬೆಳೆ, ಗದಗದಲ್ಲಿ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಆದರೂ ಬಿತ್ತನೆ ಪ್ರಮಾಣ ಅಧಿಕಾರವಾಗಿರುವುದರಿಂದ ಆಹಾರ ಉತ್ಪಾದನೆ ಇಳಿಮುಖವಾಗುವುದಿಲ್ಲ. ಈ ಬಗ್ಗೆ ಯಾರಿಗ ಆತಂಕ ಬೇಡ ಎಂದು ಪಾಟೀಲ್ ಹೇಳಿದರು.

ಬೆಳೆ ಸಮೀಕ್ಷೆ ಈಗಲೂ ಕೂಡ ನಡೆಯುತ್ತಿದೆ. ಮಳೆ ಮತ್ತೆ ಮತ್ತೆ ಬರುತ್ತಿರುವ ಕಾರಣ ರೈತರ ಬೆಳೆಗಳು ನಾಶವಾಗುತ್ತಲೇ ಇವೆ. ಹೀಗಾಗಿ ಸಮೀಕ್ಷೆ ನಡೆಸಲು ಗಡುವು ನೀಡಿಲ್ಲ ಎಂದು ತಿಳಿಸಿಲ್ಲ ಎಂದರು.

ನನ್ನ ಬೆಳೆ, ನನ್ನ ಹಕ್ಕು ಯೋಜನೆ ಜಾರಿ ಮಾಡಿದ್ದರಿಂದ ಇದು ದೇಶಕ್ಕೆ ಮಾದರಿಯಾಗಿದೆ. ಹಿಂದೆ ಬೇಕಾಬಿಟ್ಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ಈಗ ರೈತರು ತಮ್ಮ ಬೆಳೆ ಜೊತೆಗೆ ತಮ್ಮ ಸೆಲಿಯನ್ನು ಕಳುಹಿಸಬೇಕು. ಇದರಿಂದ ವಂಚನೆಯಾಗುವುದು ತಪ್ಪುತ್ತದೆ. ಅಲ್ಲದೆ ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗುತ್ತದೆ. ಮಧ್ಯವರ್ತಿಗಳ ಹಾವಳಿ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರಿಗೆ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿ ಧಾನ್ಯ ಬಗ್ಗೆ ಕಾಳಜಿ ಇದೆ. ಪ್ರಧಾನಿಗಳು ಕೂಡ ಸಿರಿ ಧಾನ್ಯದ ಬಗ್ಗೆ ತಿಳಿಸಿದ್ದಾರೆ.

164 ಕೃಷಿ ಸಂಜೀವಿನಿ ವಾಹನ ಬಿಡುಗಡೆ ಮಾಡಲಾಗುತ್ತಿದ್ದು ಈಗಾಗಲೇ ನೂರು ವಾಹನಗಳನ್ನು ಬಿಡುಗಡೆ ಮಾಡಿದ್ದೆವೆ. ಲ್ಯಾಂಡ್ ಟು ಲ್ಯಾಬ್ ಕಾರ್ಯಕ್ರಮ ಮಾಡುತ್ತಿದ್ದು, ರೈತರು ಬೆಳೆದಿರುವ ಬೆಳೆ ಸಮಸ್ಯೆ ಇದ್ದಲ್ಲಿ ಸಮಸ್ಯೆಗೆ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು.

10 ಲಕ್ಷದ 29ಸಾವಿರ ಹೆಕ್ಟೇರ್ ಬೆಳೆ ನಾಷವಾಗಿದೆ. 1,020 ಕೋಟಿ ಕೊಡಲಾಗಿದೆ. ಎನ್‍ಡಿಆರ್‍ಎಫ್ ಪ್ರಕಾರ ಹೆಕ್ಟೇರ್‍ಗೆ 6,800 ರೂ. ಇತ್ತು, 13,500 ರೂ ಹೆಕ್ಟೇರ್‍ಗೆ ಕೊಡಲಾಗುತ್ತಿದೆ ಎಂದು ವಿವರಣೆ ನೀಡಿದರು.

2018ರ ನಂತರ ಕೋವಿಡ್‍ನಿಂದಾಗಿ ಮೇಳ ನಡೆದಿರಲಿಲ್ಲ. ವರ್ಷದ ಮೊದಲಿನಲ್ಲೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ದೊರತಿದೆ. 2021ರಲ್ಲಿ ಗರಿಷ್ಠ ಬೆಳೆ ಬೆಳೆದ ಹಿನ್ನೆಲೆಯಲ್ಲಿ ಪ್ರಶಸ್ತಿ ಬಂದಿದೆ. ಜೈವಿಕ, ಅತ್ಯುತ್ತಮ ಪ್ರಶಸ್ತಿ ಬಂದಿದೆ. ಕೇಂದ್ರ ಸರ್ಕಾರದಿಂದ ಬೆಸ್ಟ್ ಪರ್ಫಾರ್ಮಿಂಗ್ ಸ್ಟೇಟ್ ಇನ್ ಮಿಲೆಟ್ಸ್ ಪ್ರಶಸ್ತಿ ದೊರೆತಿದೆ ಎಂದು ಮಾಹಿತಿ ನೀಡಿದರು.

ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಒಂದು ಮಠ, ಸಮುದಾಯ ಹಾಗೂ ಸ್ವಾಮೀಜಿಯವರ ವಿಚಾರ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಮುದಾಯಕ್ಕೆ ಸಂಬಂಧಿಸಿದವರು ಹಾಗೂ ಮಠದ ಭಕ್ತರ ನಿರ್ಧಾರ ಮೇಲೆ ನಮ್ಮ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಇದೇ ಸಂದರ್ಭದಲ್ಲಿ ಉತ್ತರಿಸಿದರು.

Articles You Might Like

Share This Article