ಅಕ್ಕನ ಮನೆಯಲ್ಲೇ ಕದ್ದ ಜೂಜುಕೋರನ ಬಂಧನ

ಬೆಂಗಳೂರು, ಮೇ 20- ತನ್ನ ಅಕ್ಕನ ಮನೆಯಲ್ಲೇ ಚಿನ್ನಾಭರಣಗಳನ್ನು ಕಳುವು ಮಾಡಿದ್ದ ಜೂಜುವೆಸನಿಯೊಬ್ಬನನ್ನು ಬ್ಯಾಟರಾಯನ ಪುರ
ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ವಾಸಿ ಅಜಿತ್ ಜಿ(26) ಬಂಧಿತ ಆರೋಪಿ. ಈತನಿಂದ 31 ಲಕ್ಷ ರೂ.ಮೌಲ್ಯದ 613 ಗ್ರಾಂ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ.

ಆರೋಪಿ ಅಜಿತ್ ತನ್ನ ದೊಡ್ಡಮ್ಮನ ಮಗಳಾದ ಸವಿತಾರ ಮನೆಗೆ ಪದೇ ಪದೇ ಬರುತ್ತಿದ್ದ. ತಮ್ಮ ಎಂಬ ಕಾರಣಕ್ಕೆ ಆಜಿತನಿಗೆ ಮನೆಯಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ನೀಡಲಾಗಿತ್ತು. ಈ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಆರೋಪಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನದ ವಡವೆಗಳನ್ನು ಒಂದೊಂದಾಗಿ ಕಳುವು ಮಾಡುತ್ತಿದ್ದ.

ಮೇ 3ರಂದು ಅಕ್ಷಯ ತೃತೀಯದ ದಿನ ಸವಿತಾ ವಡವೆಗಳನ್ನು ಪರಿಶೀಲನೆ ನಡೆಸಿದಾಗ ಕೆಲವು ಕಾಣೆಯಾಗಿರುವುದು ಕಂಡು ಬಂದಿದೆ. ಮಾರನೆ ದಿನ ಅಜಿತ್ ಮನೆಗೆ ಬಂದಿದ್ದಾನೆ. ಆತನ ಮೇಲೆ ಸಂಶಯಗೊಂಡ ಸವಿತಾ ಸದ್ದಿಲ್ಲದೆ ಗಮನಿಸಿದ್ದಾರೆ. ಆತ ಕೊಠಡಿಯೊಳಗೆ ಹೋಗಿ ಬೀರು ಬಾಗಿಲು ತೆಗೆದು ವಡವೆಗಳನ್ನು ಕದಿಯುವಾಗ ಖುದ್ದು ಹಿಡಿದುಕೊಂಡಿದ್ದಾರೆ. ತಕ್ಷಣವೇ ತಮ್ಮ ಪತಿಗೆ ವಿಷಯ ತಿಳಿಸಿ ಮನೆಗೆ ಕರೆಸಿಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.

ಆ ವೇಳೆ ತಪ್ಪು ಒಪ್ಪಿಕೊಂಡ ಆತ ತಾನು ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ವಡವೆಗಳನ್ನು ಕದ್ದಿದ್ದೇನೆ. ಸ್ವಲ್ಪ ಸಮಯ ಕೊಡಿ ಗಿರವಿ ಇಟ್ಟಿರುವ ಚಿನ್ನದ ವಡವೆಗಳನ್ನು ಬಿಡಿಸಿಕೊಡುತ್ತೇನೆ ಎಂದು ಬೇಡಿಕೊಂಡಿದ್ದಾನೆ. ಅದಕ್ಕೆ ಒಪ್ಪಿ ಸವಿತಾ ಕುಟುಂಬದವರು ಸಮಯ ನೀಡಿದ್ದಾರೆ. ಆದರೆ, ಆರೋಪಿ ವಡವೆಗಳನ್ನು ಬಿಡಿಸಿಕೊಡದೆ ಸತಾಯಿಸಿದಾಗ ಪ್ರಶ್ನಿಸಿದ್ದಾರೆ.

ವಡವೆಗಳನ್ನು ಬಿಡಿಸಿಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ, ನನ್ನ ಮನೆ ಬಳಿ ಬಂದು ಗಲಾಟೆ ಮಾಡಿದರೆ ಕೊಲೆ ಮಾಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸವಿತಾ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗಿ ತಾನು ಜೂಜಾಟದ ವ್ಯಸನಿಯಾಗಿದ್ದು, ಅದಕ್ಕೆ ಹಣ ಹೊಂದಿಸಲು ಸಹೋದರಿ ಮನೆಯಲ್ಲಿ ಕಳವು ಮಾಡಿದ್ದಾಗಿ ತಿಳಿಸಿದ್ದಾನೆ. ಆರೋಪಿ ನೀಡಿದ್ದ ಸುಳಿವಿನ ಮೇರೆಗೆ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಟ್ಟಿದ್ದ ವಡವೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.