ಬೆಂಗಳೂರು, ಫೆ.15- ವಿಜಯಪುರ ಜಿಲ್ಲಾಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ಅವರು ತಮ್ಮ ನೂರಾರು ಬೆಂಬಲಿಗರ ಜತೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅವರ ಜತೆಯಲ್ಲಿ ಆ ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಕುಮಾರಸ್ವಾಮಿ, ಸಿಂದಗಿ ಕ್ಷೇತ್ರ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ. ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು ಶಾಶ್ವತವಾಗಿ ನೀರಾವರಿ ಪರಿಹಾರ ಒದಗಿಸಿದ್ದವರು ಗೌಡರು ಎಂದರು.
ಮಾಜಿ ಸಚಿವರಾದ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು. ಅವರ ನಿಧನದ ನಂತರ ನಡೆದ ಉಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದ್ದು ನಿಜ. ಈಗ ಅದೆನ್ನೆಲ್ಲ ಸರಿ ಮಾಡುವ ಕಾಲ ಬಂದಿದೆ. ಶಿವಾನಂದ ಪಾಟೀಲ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ವಿಜಯಪುರ, ಬಾಗಲಕೋಟೆ ಜಿಲ್ಲಾಗಳು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲಾಗುವುದು. ಆ ನಿಟ್ಟಿನಲ್ಲಿ ಇನ್ನೂ ಅನೇಕ ಮುಖಂಡರು ಪಕ್ಷಕ್ಕೆ ಸೇರಲಿದ್ದಾರೆ ಎಂದು ಇದೇ ವೇಳೆ ಮಾಜಿ ಸಿಎಂ ಹೇಳಿದರು.
ಶೀಘ್ರವೇ ಜಲಧಾರೆ ಆರಂಭ: ನಾಡಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಜಾರಿ ಮಾಡುವುದು, ನಮ್ಮ ನೀರಾವರಿ ಹಕ್ಕುಗಳನ್ನು ಸಾಸಿಕೊಳ್ಳುವುದು ಸೇರಿದಂತೆ ಇಡೀ ರಾಜ್ಯಕ್ಕೆ ಜಲ ಸಮಾನತೆ ಕಲ್ಪಿಸಿ ಸಮಗ್ರ ಪ್ರಗತಿ ಸಾಸುವ ಪರಿಕಲ್ಪನೆಯೊಂದಿಗೆ ಹಮ್ಮಿಕೊಳ್ಳಲಾಗಿರುವ ಜನತಾ ಜಲಧಾರೆ ಕಾರ್ಯಕ್ರಮ ಶೀಘ್ರವೇ ಶುರುವಾಗಲಿದೆ. ಶುದ್ಧ ಕುಡಿಯುವ ನೀರು, ಬೇಸಾಯಕ್ಕೆ ಅಗತ್ಯ ನೀರು ಕೊಡುವ ಉದ್ದೇಶ ನಮ್ಮದು ಎಂದು ಅವರು ಹೇಳಿದರು.
ನಾಗಠಾಣ ಶಾಸಕ ದೇವಾನಂದ್ ಚವಾಣ್ ಮಾತನಾಡಿ, ನಮ್ಮ ಪಕ್ಷಕ್ಕೆ ಸೇರ್ಪಡೆಯಾದ ಶಿವಾನಂದ ಪಾಟೀಲ್ ಅವರಿಗೆ ಸ್ವಾಗತ. ಅವರಿಂದ ಪಕ್ಷಕ್ಕೆ ಒಳ್ಳೆಯದಾಗಲಿ ಎಂದರು. ಮುಖಂಡರಾದ ಸುನೀತಾ ಚವಾಣ್ ಸೇರಿದಂತೆ ಸಿಂದಗಿ ಕ್ಷೇತ್ರದ ಅನೇಕ ಹಿರಿಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
