ನವದೆಹಲಿ, ಜ.15- ಕಾರು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಎಂಟು ಮಂದಿ ಪ್ರಯಾಣಿಸಬಹುದಾದ ಎಂ 1 ಮಾದರಿಯ ಕಾರುಗಳಿಗೆ ಕನಿಷ್ಠ ಆರು ಏರ್ ಬ್ಯಾಗ್ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ಈ ಬಗ್ಗೆ ಸರಣಿ ಟ್ವಿಟ್‍ಗಳನ್ನು ಮಾಡಿದ್ದಾರೆ. ಈ ಮೊದಲು 2019ರ ಜುಲೈ 1ರಿಂದ ಚಾಲಕನ ಸೀಟಿಗೆ ಏರ್‍ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. 2022ರ ಜನವರಿ 1ರಿಂದ ಮುಂದಿನ ಭಾಗದ ಸಹಪ್ರಯಾಣಿಕರ ಸ್ಥಾನಕ್ಕೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಇದೇ ವರ್ಷದ ಅಕ್ಟೋಬರ್ 1ರಿಂದ ಉತ್ಪಾದನೆಗೊಳ್ಳುವ ಎಂ1 ಮಾದರಿ ಎಲ್ಲಾ ಕಾರುಗಳಿಗೂ ಆರು ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧಪಟ್ಟಂತೆ 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗುತ್ತಿದೆ. ಪ್ರಸ್ತಾವಿತ ತಿದ್ದುಪಡಿ ಕರಡು ಮಸೂದೆಯನ್ನು ಜನವರಿ 14ರಂದು ಪ್ರಕಟಿಸಲಾಗಿದೆ. ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿದ ಬಳಿಕ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ತಿದ್ದುಪಡಿಯ ಪ್ರಕಾರ ಎಂ1 ಮಾದರಿಯ ಕಾರುಗಳಲ್ಲಿ ಮುಂದಿನ ಎರಡು ಸೀಟುಗಳಿಗೆ, ಹಿಂದಿನ ಸೀಟಿನ ಮುಂಭಾಗ ಮತ್ತು ಅಕ್ಕಪಕ್ಕದಲ್ಲಿ ಒಟ್ಟು ಆರು ಏರ್‍ಬ್ಯಾಗ್‍ಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಇದು ಜಾರಿಗೆ ಬಂದರೆ ಅಪಘಾತವಾದ ವೇಳೆ ಪ್ರಯಾಣಿಕರು ಹೆಚ್ಚಿನ ಗಾಯಗೊಳ್ಳದೆ ಸುರಕ್ಷಿತವಾಗಿರಲು ಸಾಧ್ಯವಾಗಲಿದೆ ಎಂದು ರಸ್ತೆ ಸಾರಿಗೆ ಇಲಾಖೆ ತಿಳಿಸಿದೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ 2020ರಲ್ಲಿ 1,14.496 ಹೆದ್ಧಾರಿ ಅಪಘಾತಗಳು ಸಂಭವಿಸಿದ್ದು, 47,984 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ ಸಚಿವ ನೀತಿನ್ ಗಡ್ಕರಿ ಅವರು, ಶ್ರೀಮಂತರು ಬಳಕೆ ಮಾಡುವ ಕಾರಗಳಿಗಷ್ಟೆ ಆಟೋ ಮೊಬೈಲ್ ಕಂಪೆನಿಗಳು ಎಂಟು ಏರ್‍ಬ್ಯಾಗ್‍ಗಳನ್ನು ಅಳವಡಿಕೆ ಮಾಡುತ್ತಿದೆ.
ಮಧ್ಯಮ ಮತ್ತು ಸಣ್ಣ ಆದಾಯ ಹೊಂದಿರುವ ಕುಟುಂಬಗಳು ಬಳಕೆ ಮಾಡುವ ಕಾರುಗಳಿಗೆ ಅಗತ್ಯದಷ್ಟು ಏರ್‍ಬ್ಯಾಗ್‍ಗಳನ್ನು ಅಳವಡಿಕೆ ಮಾಡಿ ಸುರಕ್ಷತೆಯನ್ನು ಖಚಿತ ಪಡಿಸುವ ಕೆಲಸವಾಗಬೇಕು ಎಂದು ಹೇಳಿದ್ದರು. ಈಗಾಗಲೇ ತೆರಿಗೆ ಪದ್ಧತಿಯಿಂದ ಬಳಲಿರುವ ಆಟೋಮೊಬೈಲ್ ಉದ್ಯಮ ಕೇಂದ್ರ ಸರ್ಕಾರದ ಹೊಸ ನಿಯಮಗಳಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ ಎನ್ನಲಾಗುತ್ತದೆ. ಏರ್‍ಬ್ಯಾಗ್‍ಗಳ ಅಳವಡಿಕೆಯಿಂದ ಸಣ್ಣ ಕಾರುಗಳ ಉತ್ಪಾದನಾ ವೆಚ್ಚ 3ರಿಂದ ನಾಲ್ಕು ಸಾವಿರ ಹೆಚ್ಚಾಗುವ ಆತಂಕವೂ ಇದೆ.
