ಶ್ರೀನಗರ, ಆ.16- ಅಮರನಾಥ್ ಯಾತ್ರೆಯ ಭದ್ರತಾ ಕೆಲಸ ಮುಗಿಸಿ ಮರಳುತ್ತಿದ್ದ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರಿದ್ದ ಬಸ್‍ವೊಂದು ನದಿ ಪಾತ್ರಕ್ಕೆ ಉರುಳಿ ಬಿದ್ದು ಆರು ಮಂದಿ ಯೋಧರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಚಂದನವಾರಿಯಿಂದ ಪಾಹಲ್ಗಾಮ್‍ಗೆ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್ ಚಂದನವಾರಿಯ ಬಳಿ ಮೊರ್ಹ ಫ್ರಿಸ್ಲಾನ್ ತಿರುವಿನಲ್ಲಿ ಬ್ರೆಕ್ ಫೈಲ್ ಆಗಿ ಹಿಡಿತ ತಪ್ಪಿದೆ. ಎತ್ತರದ ಪ್ರದೇಶದಿಂದ ಬಸ್ ಸರಣಿ ಉರುಳುಗಳ ಮೂಲಕ ನದಿ ಪಾತ್ರಕ್ಕೆ ಬಿದ್ದಿದೆ. ಘಟನೆಯಲ್ಲಿ ಬಸ್ ನುಜ್ಜುಗುಜ್ಜಾಗಿದೆ.
ಜಮ್ಮು-ಕಾಶ್ಮೀರದಲ್ಲಿನ ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕೆ ಆಗಸ್ಟ್ 11ರಂದು ನಿಯೋಜಿಸಿದ್ದ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆಯ 37 ಮತ್ತು ಜಮ್ಮು-ಕಾಶ್ಮೀರದ ಇಬ್ಬರು ಪೊಲೀಸರು ವಾಪಾಸ್ ಬರುತ್ತಿದ್ದರು.
ದುರ್ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು, ಪೊಲೀಸರು, ಪ್ರಕೃತಿ ವಿಕೋಪ ನಿರ್ವಹಣಾ ಪಡೆಯ ಯೋಧರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತಪಟ್ಟ ಆರು ಮಂದಿ ಯೋಧರ ಪಾರ್ಥಿವ ಶರೀರವನ್ನು ನದಿಪಾತ್ರದ ಕಣಿವೆಯಿಂದ ಮೇಲಕ್ಕೆ ತಂದಿದ್ದಾರೆ. ಕಲ್ಲಿನ ರಾಶಿಯ ದುರ್ಘಮ ಹಾದಿಯಲ್ಲಿ ಗಾಯಾಳುಗಳನ್ನು ಮೇಲಕ್ಕೆ ಸಾಗಿಸಲಾಗಿದೆ. 19 ಆಂಬ್ಯುಲೆನ್ಸ್‍ಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿವೆ.
ಅನಂತನಾಗ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಮೂವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅವರಿಗೆ ಪಾಹಲ್ಗಮ್ ಉಪವಿಭಾಗ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬಿಎಸ್‍ಎಫ್‍ನ ಹೆಲಿಕಾಫ್ಟರ್ ಮೂಲಕ ಏರ್ ಲಿಫ್ಟ್ ಮೂಲಕ ಶ್ರೀನಗರ ಹಾಗೂ ಇತರ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅನಂತನಾಗ್ ಜಿಲ್ಲೆಯ ಜಿಲ್ಲಾಕಾರಿ ಡಾ.ಪಿಯುಷ್ ಸಿಂಗಾಲ್ ತಿಳಿಸಿದ್ದಾರೆ.
ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಅನೇಕ ಗಣ್ಯರು ತೀವ್ರ ಶೋಕ ವ್ಯಕ್ತ ಪಡಿಸಿದ್ದು, ಮೃತಪಟ್ಟವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.