ಆಮೆಗತಿ ವೈಟ್ ಟ್ಯಾಪಿಂಗ್ ಕಾಮಗಾರಿ, BBMPಗೆ ವಾಹನ ಸವಾರರ ಹಿಡಿಶಾಪ

Social Share

ರಮೇಶ್ ಪಾಳ್ಯ

ಬೆಂಗಳೂರು,ನ.4- ತಿರುಪತಿ ತಿಮ್ಮಪ್ಪನ ದರ್ಶನ ಬೇಕಾದರೆ ಆದಷ್ಟು ಬೇಗ ಮಾಡಿ ಬರಬಹುದು. ಅದರೆ, ಯಶವಂತಪುರದಿಂದ ಮಲ್ಲೇಶ್ವರಂ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಗೋಳು ಮಾತ್ರ ಯಾರಿಗೂ ಬೇಡ.

ಮೆಜೆಸ್ಟಿಕ್ನಿಂದ ಮಲ್ಲೇಶ್ವರಂ ಮಾರ್ಗವಾಗಿ ತುಮಕೂರಿಗೆ ಹೋಗುವ ಬಸ್ಗಳು ಸೇರಿದಂತೆ ಪ್ರತಿನಿತ್ಯ ಯಶವಂತಪುರ-ಮಲ್ಲೇಶ್ವರಂನ ಪ್ರಮುಖ ರಸ್ತೆಯಲ್ಲೇ ಸಾಗಬೇಕಿರುವುದರಿಂದ ಈ ರಸ್ತೆಯಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಇಂತಹ ವಾಹನ ದಟ್ಟಣೆ ರಸ್ತೆಯಲ್ಲಿ ಬಿಬಿಎಂಪಿಯವರು ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದ್ದಾರೆ.

ಹೀಗಾಗಿ ಸಂಚಾರಿ ಪೊಲೀಸರು ಅತಿ ಹೆಚ್ಚು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಏಕಮುಖ ಸಂಚಾರ ಮಾಡಿರುವುದರಿಂದ ವಾಹನಗಳು ಅಮೆ ವೇಗದಲ್ಲಿ ಸಂಚರಿಸುವಂತಾಗಿರುವುದರಿಂದ ತಮ್ಮ ದೈನಂದಿನ ಕೆಲಸಗಳಿಗೆ ಇದೇ ದಾರಿಯಲ್ಲಿ ಸಾಗುವ ವಾಹನ ಸವಾರರು ಬಿಬಿಎಂಪಿಯವರ ನಿಧಾನಗತಿ ಕಾಮಗಾರಿಗೆ ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಮಲ್ಲೇಶ್ವರಂನ ಸಂಪಿಗೆ ರಸ್ತೆಯಿಂದ ಯಶವಂತಪುರದ ಪ್ರಮುಖ ರಸ್ತೆ ಮಾರ್ಗವನ್ನು ಬಂದ್ ಮಾಡಿರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನೇ ಅವಲಂಬಿಸಬೇಕಾಗಿರುವುದರಿಂದ ಈ ಮಾರ್ಗದ ಅಕ್ಕಪಕ್ಕದ ಎಲ್ಲಾ ರಸ್ತೆಗಳಲ್ಲೂ ಇರುವೆ ಸಾಲಿನಂತೆ ವಾಹನಗಳು ಚಲಿಸುತ್ತಿರುವುದು ಕಂಡು ಬರುತ್ತಿದೆ.

ಕೇವಲ 15 ನಿಮಿಷಗಳಲ್ಲಿ ಸಂಪಿಗೆ ರಸ್ತೆಯಿಂದ ಯಶವಂತಪುರಕ್ಕೆ ತಲುಪಬಹುದಾದ ದೂರವನ್ನು ಈಗ ಕನಿಷ್ಠ ಮೂರು ಗಂಟೆಗಳ ಕಾಲ ವ್ಯಯಿಸಬೇಕಿದೆ ಎಂದರೆ ವಾಹನ ಸವಾರರ ತಾಳ್ಮೆ ಎಷ್ಟಿರಬೇಕು ನೀವೆ ಊಹಿಸಿ.

ಒಂದು ಕಡೆ ವಾಹನ ಸವಾರರು ಪರದಾಡುತ್ತ ಸಂಚರಿಸುತ್ತಿದ್ದರೆ, ಮತ್ತೊಂದು ಕಡೆ ಜನನಿಬಿಡ ಪ್ರದೇಶಗಳ ರಸ್ತೆಗಳಲ್ಲಿ ಸಾಲುದ್ದ ವಾಹನಗಳು ಸಂಚರಿಸುತ್ತಿರುವುದರಿಂದ ಸ್ಥಳೀಯ ಜನರು ಹೈರಾಣಾಗಿದ್ದಾರೆ. ವಾಹನದಟ್ಟಣೆ ಸಮಸ್ಯೆಗೆ ಬೇಗ ಮುಕ್ತಿ ಹಾಡಿ ಎಂದು ಸ್ಥಳೀಯ ನಿವಾಸಿಗಳು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದರು. ದಪ್ಪ ಚರ್ಮದ ಬಿಬಿಎಂಪಿ ಅಧಿಕಾರಿಗಳಿಗೆ ಮಾತ್ರ ಜನರ ಆಕ್ರಂಧನ ಕೇಳಿಸುತ್ತಲೆ ಇಲ್ಲ.

ಶಾಂತಿಯುತ ವಾತಾವರಣವಿದ್ದ ಮಲ್ಲೇಶ್ವರಂ ಸುತ್ತಮುತ್ತಲ ಪ್ರದೇಶಗಳು ವಾಹನ ದಟ್ಟಣೆಯಿಂದಾಗಿ ಧೂಳಿನ ಕೊಂಪೆಯಾಗಿವೆ. ಒಂದು ಕಡೆ ಇರುವೆ ಸಾಲಿನಂತೆ ಸಾಗುವ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗಿರುವುದರ ಜೊತೆಗೆ ಫುಟ್ಪಾತ್ಗಳನ್ನೂ ಆಗೆದು ಹಾಗೇ ಬಿಟ್ಟಿರುವುದರಿಂದ ಹಿರಿಯ ನಾಗರೀಕರು ಮನೆಯಿಂದ ವಾಕಿಂಗ್ಗೆ ಹೊರ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಚಿವರ ಮಾತಿಗೂ ಬೆಲೆ ಇಲ್ಲ: ಜನರ ಸಂಕಷ್ಟು ಅರಿತ ವೈದ್ಯಕೀಯ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಅದಷ್ಟು ಬೇಗ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅವರ ಮಾತಿಗೂ ಬಿಬಿಎಂಪಿ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದರಿಂದ ಕಳೆದ ಆಗಸ್ಟ್ನಿಂದ ಈ ರಸ್ತೆಯ ಗೋಳು ತೀರದಂತಾಗಿದೆ.

ಎಲ್ಲೆಲ್ಲಿ ಓನ್ ವೇ: ಯಶವಂತಪುರದ ಸಿ.ವಿ.ರಾಮನ್ ರಸ್ತೆಯಿಂದ ಮಾರಮ್ಮ ಜಂಕ್ಷನ್ವರೆಗೆ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ನಡೆಸುತ್ತಿರುವುದರಿಂದ ಸಂಚಾರಿ ಪೊಲೀಸರು ಕಳೆದ ಆಗಸ್ಟ್ 21 ರಿಂದ ದಾರಿ ಆಂಜನೇಯ ಟೆಂಪಲ್ನಿಂದ ಮಾರಮ್ಮ ಜಂಕ್ಷನ್ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಸಿದ್ದಾರೆ.

ಯಶವಂತಪುರ ಸರ್ಕಲ್ನಿಂದ ಮೇಖ್ರಿ ಸರ್ಕಲ್ ಕಡೆಗೆ ಚಲಿಸುವ ವಾಹನಗಳು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯಿಂದ ಏಕಮುಖ ಸಂಚಾರಕ್ಕೆ ವಿರುದ್ಧವಾಗಿ ಸಂಚರಿಸಿ ಬಿಎಚ್ಇಎಲ್ ಸೇತುವೆ ಪ್ರಾರಂಭದಲ್ಲಿ ಬಲಭಾಗದ ಸರ್ವೀಸ್ ರಸ್ತೆಯ ಮುಖಾಂತರ ಬಿಎಚ್ಇಎಲ್ ಸೇತುವೆ ಮೇಲೆ ಎಡತಿರುವು ಪಡೆದು ಸದಾಶಿವ ನಗರ ಪೊಲೀಸ್ ಠಾಣೆ ಜಂಕ್ಷನ್ ಮೂಲಕ ಮೇಖ್ರಿ ವೃತ್ತ ತಲುಪಬೇಕಿದೆ.

ಅದೇ ರೀತಿ ಯಶವಂತಪುರ ಸರ್ಕಲ್ನಿಂದ ಮೆಜೆಸ್ಟಿಕ್ ಕಡೆಗೆ ಚಲಿಸುವ ವಾಹನಗಳು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯ ಮುಂಭಾಗದ ಏಕಮುಖ ಸಂಚಾರಕ್ಕೆ ವಿರುದ್ಧವಾಗಿ ಬಿಎಚ್ಇಎಲ್ ಸೇತುವೆ ಕೆಳ ಭಾಗದಲ್ಲಿ ನೇರವಾಗಿ ಚಲಿಸಿ ಮಾರಮ್ಮ ಸರ್ಕಲ್ ತಲುಪಿ ಅಲ್ಲಿಂದ ಮಲ್ಲೇಶ್ವರಂ 18ನೇ ಕ್ರಾಸ್ ಮುಖಾಂತರ ಮೆಜೆಸ್ಟಿಕ್ ತಲುಪಬೇಕಿದೆ.

ತುಮಕೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆ ಚಲಿಸುವ ವಾಹನಗಳು ಗೊರಗುಂಟೆಪಾಳ್ಯ-ಎಂಇಇ ಜಂಕ್ಷನ್-ಮಾರಪ್ಪನಪಾಳ್ಯ-ಒರಾಯನ್ ಮಾಲ್-ನವರಂಗ್-ಡಾ.ರಾಜ್ಕುಮಾರ್ ರಸ್ತೆ ಮೂಲಕ ಲುಲು ಮಾಲ್ ಮಾರ್ಗವಾಗಿ ಮೆಜೆಸ್ಟಿಕ್ ತಲುಪಬೇಕಿದೆ.

ಯಶವಂತಪುರದಿಂದ ಹೆಬ್ಬಾಳ ಕಡೆಗೆ ಚಲಿಸುವ ವಾಹನಗಳು ಯಶವಂತಪುರ ತ್ರಿವೇಣಿ ರಸ್ತೆಗೆ ಹೋಗಿ ಮತ್ತಿಕೆರೆ ರಸ್ತೆಯಲ್ಲಿ ಎಡ ತಿರುವು ಪಡೆದು ಬಿಇಎಲ್ ಸರ್ಕಲ್ನಲ್ಲಿ ಬಲ ತಿರುವು ಪಡೆದು ಹೆಬ್ಬಾಳ ಕಡೆ ಸಂಚರಿಸಬೇಕಿದೆ.

ಮೇಖ್ರಿ ಸರ್ಕಲ್ನಿಂದ ಸದಾಶಿವನಗರದ ಕಡೆಯಿಂದ ಯಶವಂತಪುರಕ್ಕೆ ಬರುವ ವಾಹನಗಳು ಬಿಹೆಚ್ಇಎಲ್ ಜಂಕ್ಷನ್ನಲ್ಲಿ ಎಡತಿರುವು ಪಡೆದು ಸರ್ಕಲ್ ಮಾರಮ್ಮ ದೇವಸ್ಥಾನ-ಮಾರ್ಗೋಸಾ ರಸ್ತೆ ಮೂಲಕ ಮಲ್ಲೇಶ್ವರಂ 15ನೆ ಕ್ರಾಸ್ನಲ್ಲಿ ಬಲತಿರುವು ಪಡೆದು ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್ಗೆ ಸಂಚರಿಸಬೇಕಿದೆ.

ಮತ್ತಿಕೆರೆ ಕಡೆಯಿಂದ ಯಶವಂತಪುರ ಸರ್ಕಲ್ಗೆ ಬರುವ ವಾಹನಗಳು 1ನೇ ಮೈನ್ ಮುಖಾಂತರ ಯಶವಂತಪುರ ಸರ್ಕಲ್ಗೆ ಬರುವಂತಾಗಿದೆ.
ಕೊಂಕಣ ಸುತ್ತಿ ಮೈಲಾರಕ್ಕೆ ಬಂದರೂ ಅನ್ನೊ ಹಾಗೇ ಕೇವಲ 10 ಕಿ.ಮೀ. ದೂರದ ಮಾರ್ಗ ಕ್ರಮಿಸಲು ವಾಹನ ಸವಾರರು ಗಂಟೆಗಟ್ಟಲೆ ತಮ್ಮ ವಾಹನಗಳಲ್ಲೇ ಕಾಲ ಕಳೆಯುವಂತಾಗಿದೆ.

ಡಾ.ರಾಜ್ಕುಮಾರ್ ಮಾರ್ಗದ ಮೂಲಕ ಯಶವಂತಪುರಕ್ಕೆ ಬರುವ ವಾಹನಗಳು ಯಶವಂತಪುರದ ಪಂಡಿತ್ ದೀನ್ದಯಾಳ್ ಮೇಲ್ಸೇತುವೆ ಪ್ರವೇಶಿಸಲು ಎಡ ತಿರುವು ಪಡೆದುಕೊಳ್ಳಲು ಸುಮಾರು ತಾಸು ಕಾಯುವಂತಹ ಪರಿಸ್ಥಿತಿ ಇದೆ.

ಈಗಾಗಲೇ ಈ ಭಾಗದ ರಸ್ತೆಯಲ್ಲಿ ಸಂಚರಿಸುತ್ತ ತಮ್ಮ ತಾಳ್ಮೆ ಕಳೆದುಕೊಂಡಿರುವ ವಾಹನ ಸವಾರರ ಕೋಪದ ಕಟ್ಟೆ ಒಡೆಯುವುದರೊಳಗೆ ಬಿಬಿಎಂಪಿಯವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಬಡವನ ಕೋಪ ದವಡೆಗೆ ಮೂಲ ಅನ್ನುವಂತಾದರೂ ಅಚ್ಚರಿಪಡುವಂತಿಲ್ಲ.

ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ವೈಟ್ ಟಾಪಿಂಗ್ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣಗೊಳಿಸುವ ಮೂಲಕ ವಾಹನ ಸವಾರರ ಕಣ್ಣೀರ ಕಥೆಗೆ ಅಂತ್ಯ ಹಾಡಬೇಕಿದೆ.

Articles You Might Like

Share This Article