ಪದ್ಮವಿಭೂಷಣ ಬಯಸದೆ ಬಂದ ಭಾಗ್ಯ : ಎಸ್.ಎಂ.ಕೃಷ್ಣ

Social Share

ಬೆಂಗಳೂರು,ಜ.26- ಪದ್ಮವಿಭೂಷಣ ಪ್ರಶಸ್ತಿ ನನಗೆ ಬಯಸದೆ ಬಂದ ಭಾಗ್ಯ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರು ಬಣ್ಣಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಸುಮಾರು ಆರು ದಶಕಗಳ ಕಾಲ ನಾನು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರದ ವಿದೇಶಾಂಗ ವ್ಯವಹಾರ, ವಿಧಾನಸಭೆಯ ಸಭಾಧ್ಯಕ್ಷ ಸೇರಿದಂತೆ ವಿವಿಧ ಸಚಿವ ಸ್ಥಾನದ ಖಾತೆಗಳನ್ನು ನಿಭಾಯಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.

ರಾಜಕೀಯ ಕ್ಷೇತ್ರದಲ್ಲಿ ನಾನೇನು ದೊಡ್ಡ ಸಾಧನೆ ಮಾಡಿಲ್ಲ. ಜನರ ಆಶೀರ್ವಾದಿಂದ ಸಿಕ್ಕ ಅಧಿಕಾರವನ್ನು ಜನರಿಗಾಗಿ ಅಷ್ಟೋ ಇಷ್ಟೋ ಕೆಲಸ ಮಾಡಿರುವ ತೃಪ್ತಿ ನನಗಿದೆ. ಕೇಂದ್ರ ಸರ್ಕಾರ ನನ್ನ ಅಲ್ಪ ಸೇವೆಯನ್ನು ಗುರುತಿಸಿ ಅತ್ಯುನ್ನತ ಎರಡನೇ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ನನಗೆ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಪ್ರಶಸ್ತಿ ಬರುತ್ತದೆ ಎಂದು ನಾನು ಎಂದಿಗೂ ನಿರೀಕ್ಷೆ ಮಾಡಿರಲಿಲ್ಲ. ಅಷ್ಟು ದೊಡ್ಡ ಪ್ರಶಸ್ತಿ ಪಡೆಯಲು ನಾನು ಅರ್ಹನು ಅಲ್ಲ ಎನ್ನುವ ಅಳುಕಿತ್ತು. ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ ಮೇಲೆ ಅನೇಕರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಮಸ್ತ ಏಳೂವರೆ ಕೋಟಿ ಕನ್ನಡಿಗರಿಗೆ ಸಿಕ್ಕ ಗೌರವ ಎಂದರು.

ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ದಾಖಲೆ

ನಾನು ಈಗಾಗಲೇ ಘೋಷಣೆ ಮಾಡಿರುವಂತೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿದ್ದೇನೆ. ಯಾವುದೇ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮೇಲೆ ಪರ-ವಿರೋಧ ಅಭಿಪ್ರಾಯಗಳು ಇದ್ದೇ ಇರುತ್ತವೆ ಎಂದು ಅಭಿಪ್ರಾಯಪಟ್ಟರು.

ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ನನಗೆ ಸ್ವಾಭಾವಿಕವಾಗಿ ಸಂತಸವಾಗಿದೆ. ನಾನು ಪ್ರಾರಂಭದಲ್ಲಿ ಬಂದ ರಾಜಕಾರಣಕ್ಕೂ, ಈಗಿನ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಾಲಕಾಲಕ್ಕೆ ರಾಜಕೀಯ ಕ್ಷೇತ್ರದಲ್ಲೂ ಬದಲಾವಣೆಯಾಗುತ್ತಿದೆ.

ಗಣರಾಜ್ಯೋತ್ಸವ ಸಂಧರ್ಭದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಾಜ್ಯಪಾರು

ಅದಕ್ಕೆ ಹೊಂದಿಕೊಂಡು ಹೋಗಲೇಬೇಕು. ಇಂದಿನ ಯುವ ಜನತೆಗೆ ತಕ್ಕಂತೆ ಸರ್ಕಾರ ಆಡಳಿತ ನಡೆಸಬೇಕು. ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿರುವ ಕಾರಣ ನನ್ನನ್ನು ಯಾರೊಬ್ಬರೂ ರಾಜಕಾರಣಕ್ಕೆ ಬನ್ನಿ ಎಂದು ಆಹ್ವಾನಿಸಿಲ್ಲ. ಸದ್ಯಕ್ಕೆ ನಾನು ಸಂತೃಪ್ತಿಯಿಂದ ಇದ್ದೇನೆ ಎಂದು ಎಸ್.ಎಂ.ಕೃಷ್ಣ ಹೇಳಿದರು.

ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಯನ್ನು ಎಸ್.ಎಂ.ಕೃಷ್ಣ ಅವರಿಗೆ ಘೋಷಣೆ ಮಾಡಿದೆ.

SM Krishna, Padma Vibhushan, awardees,

Articles You Might Like

Share This Article