ಬೆಂಗಳೂರು,ಜ.27- ಮಧ್ಯಾಹ್ನದ ಬಿಸಿಯೂಟ, ಯಶಸ್ವಿನಿ ಯೋಜನೆ ಸೇರಿದಂತೆ ಜನಪರ ಮತ್ತು ರೈತಪರ ಆಡಳಿತ ನೀಡಿದ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ಯುವ ಪೀಳಿಗೆಗೆ ಆದರ್ಶ ರಾಜಕಾರಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು.
ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾದ ಹಿನ್ನಲೆಯಲ್ಲಿ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಸಿದ ಹೊಟ್ಟೆಯಲ್ಲಿ ಮಕ್ಕಳು ಶಾಲೆಗೆ ಬರಬಾರದು ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಿದರು.
ಅದೇ ರೀತಿ ರೈತರಿಗೆ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಿದರು. ಇದು ಕೆಲ ಕಾಲ ಸ್ಥಗಿತಗೊಂಡಿತ್ತು. ಅದನ್ನು ನಾನು ಮರುಚಾಲನೆ ನೀಡಿದ್ದೇನೆ ಹೀಗಾಗಿ ಎಸ್.ಎಂ.ಕೃಷ್ಣ ಅವರು ರಾಜಕೀಯ ಕ್ಷೇತ್ರದಲ್ಲಿ ಬರುವವರಿಗೆ ಆದರ್ಶಪ್ರಾಯವಾಗಿದ್ದಾರೆ ಎಂದು ಬಣ್ಣಿಸಿದರು.
ಜನಪರ, ರೈತಪರ ಆಡಳಿತ ನಡೆಸುವುದರ ಜೊತೆಗೆ ಐಟಿಬಿಟಿ ಕ್ಷೇತ್ರದಲ್ಲಿ ಬೆಂಗಳೂರನ್ನು ವಿಶ್ವವೇ ಕಣ್ಣೆತ್ತಿ ನೋಡುವಂತೆ ಮಾಡಿದ ಓರ್ವ ಮುತ್ಸದ್ದಿ ರಾಜಕಾರಣಿ. ಅವರು ಹಾಕಿದ ಅಡಿಗಲ್ಲಿನಿಂದಲೇ ಇಂದು ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಸಾಧನೆ ಮಾಡಲು ಸಾಧ್ಯವಾಯಿತು. ಅವರ ಆಡಳಿತ ವೈಖರಿ ನಮ್ಮಂತವರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿಗೆ ಅಮಿತ್ ಷಾ: ಚುನಾವಣೆ ಕಾರ್ಯತಂತ್ರಕ್ಕೆ ಸರಣಿ ಸಭೆ
ಕಾವೇರಿ ನದಿನೀರು ಹಂಚಿಕೆ ಸೇರಿದಂತೆ ಅನೇಕ ಜಟಿಲ ವಿಷಯಗಳನ್ನು ತಮ್ಮ ರಾಜಕೀಯ ಮುತ್ಸದ್ದಿತನದಿಂದಲೇ ಅತ್ಯಂತ ಸೂಕ್ಷ್ಮವಾಗಿ ಪರಿಹರಿಸಿದ ಚಾಣಾಕ್ಷ ರಾಜಕಾರಣಿ. ಅವರ ಆಡಳಿತ ಶೈಲಿಯಿಂದ ಕರ್ನಾಟಕಕ್ಕೆ ದೇಶದಲ್ಲೇ ಉತ್ತ ಹೆಸರು ಬಂದಿತ್ತು. ಯಾವುದೇ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಕಷ್ಟು ಮುಂದಾಲಚನೆಮಾಡುತ್ತಿದ್ದರು. ಅವರ ಸಾರ್ವಜನಿಕ ಜೀವನ ತೆರೆದ ಪುಸ್ತಕದಂತಿದೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಒಬ್ಬ ಸಜ್ಜನ ರಾಜಕಾರಣಿ ಎಂದು ಗುರುತಿಸಿ ಪ್ರಧಾನಿ ನರೇಂದ್ರಮೋದಿ ಅವರು ಅತ್ಯಂತ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟಿರುವುದು ಅತ್ಯಂತ ಸೂಕ್ತ ಮತ್ತು ಅರ್ಹವಾಗಿದೆ. ಇದು ಇಡೀ ಕರ್ನಾಟಕ ಜನತೆಗೆ ಸಂದ ಗೌರವವೆಂದು ಹೇಳಿದರು.
ಹಿಂದೆ ಪ್ರಶಸ್ತಿಗೆ ಅರ್ಜಿ ಹಾಕಿಕೊಂಡು ನಮಗೆ ಬರುತ್ತದೆಯೆ ಎಂದು ಕಾಯಬೇಕಿತ್ತು. ಆದರೆ ಈಗ ಸಾಧಕರನ್ನು ಹುಡುಕಿಕೊಂಡು ಪ್ರಶಸ್ತಿಗಳೇ ಮನೆ ಬಾಗಿಲಿಗೆ ಬರುತ್ತಿವೆ. ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪಡೆದ ಕರ್ನಾಟಕ 8 ಮಂದಿ ಸಾಧಕರು ಮುತ್ತುರತ್ನಗಳು ಎಂದು ಹೊಗಳಿದರು.
ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲೇ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಅವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಸ್.ಎಂ.ಕೃಷ್ಣ ಮಾತನಾಡಿ, ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಬಂದಿರುವುದು ನಿಜಕ್ಕೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಇದು ಬಯಸದೆ ಬಂದ ಭಾಗ್ಯ. ನನ್ನ ಕನಸು ಮನಸ್ಸಿನಲ್ಲೂ ಕೂಡ ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಮುಂದುವರೆದ ಮೋದಿ ಕುರಿತ ಬಿಬಿಸಿ ಸರಣಿ ಪ್ರದರ್ಶನ
ರಾಜಕೀಯ ಕ್ಷೇತ್ರದಲ್ಲಿ ನಾನು ಮಾಡಿರುವ ಅಲ್ಪ ಸೇವೆಯನ್ನು ಗುರುತಿಸಿ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತಿತರರು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿರುತ್ತೇನೆ ಎಂದು ಹೇಳಿದರು.
ಮಧ್ಯಾಹ್ನದ ಬಿಸಿಯೂಟ ಮತ್ತು ಯಶಸ್ವಿನಿ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಗಳು. ರಾಜ್ಯ ಸರ್ಕಾರ ನನ್ನನ್ನು ತುಂಬ ಗೌರವದಿಂದ ನಡೆಸಿಕೊಂಡಿದೆ. ನಾಡಪ್ರಭು ಕೆಂಪೇಗೌಡ , ಪದ್ಮವಿಭೂಷಣ ಪ್ರಶಸ್ತಿ ಸಂದಿವೆ. ಸಚಿವರು ಮತ್ತು ಎಲ್ಲ ಪಕ್ಷಗಳ ಮುಖಂಡರಿಗೂ ನಾನು ಆಬಾರಿಯಾಗಿದ್ದಾನೆ ಎಂದರು.
ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.
SMKrishna, PadmaVibhushan, CMBommai, ಪದ್ಮವಿಭೂಷಣ,