ಪ್ರತಿ ತಾಲೂಕಿಗೊಂದು ಕೈಗಾರಿಕಾ ವಲಯ ಸ್ಥಾಪನೆ : ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್

Spread the love

Srinivas--01
ಬೆಂಗಳೂರು, ಜೂ.15-ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ರಾಜ್ಯಾದ್ಯಂತ ಸರ್ವೆ ನಡೆಸಿ ಬೇಡಿಕೆ ಆಧಾರಿತವಾಗಿ ತಾಲೂಕಿಗೊಂದರಂತೆ ಕೈಗಾರಿಕಾ ವಲಯವನ್ನು ಸ್ಥಾಪಿಸುವುದಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು. ವಿಧಾನಸೌಧದಲ್ಲಿಂದು ಕಚೇರಿ ಪೂಜೆ ಮಾಡಿ ಕೆಲಸ ಆರಂಭಿಸಿದ ನೂತನ ಸಚಿವರು, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸರ್ಕಾರ ನಿರೀಕ್ಷೆ ಮಾಡಿದ ಮಟ್ಟದಲ್ಲಿ ಆಗಿಲ್ಲ. ಸಣ್ಣ ಮತ್ತು ಮಧ್ಯಮ ವರ್ಗದ ಯುವಕರಿಗೆ ಉದ್ಯೋಗ ಒದಗಿಸುವ ಈ ಕ್ಷೇತ್ರ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಹೇಳಿದರು.

ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ನೀಡಲು ಕೆಎಸ್‍ಎಫ್‍ಸಿಗೆ ಸರ್ಕಾರ 800 ಕೋಟಿ ರೂ. ಅನುದಾನ ನೀಡುತ್ತಿದೆ. ಅದು ಎಷ್ಟು ಸದುಪಯೋಗವಾಗಿದೆ ಎಂಬುದನ್ನು ಪರಿಶೀಲಿಸಿದ್ದೇನೆ ಎಂದು ತಿಳಿಸಿದರು. ಸಣ್ಣ ಕೈಗಾರಿಕೆಗಳು ಹಿಂದುಳಿಯಲು ಪ್ರಮುಖ ಕಾರಣ ಭೂಮಿ ಲಭ್ಯತೆ ಇಲ್ಲದಿರುವುದು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಶೇ.20ರಷ್ಟನ್ನು ಸಣ್ಣ ಕೈಗಾರಿಕೆಗಳಿಗೆ ನೀಡಬೇಕು. ಆದರೆ ಈ ನಿಯಮ ಪಾಲನೆಯಾಗಿಲ್ಲ. ಮಂಡಳಿಯು ಸಣ್ಣ ಕೈಗಾರಿಕೆಗಳಿಗೆ ಭೂಮಿಯನ್ನು ನೀಡಿಲ್ಲ ಎಂದರು.

ಸಣ್ಣಕೈಗಾರಿಕೆಗಳ ಹೆಸರಿನಲ್ಲಿ ತೆಗೆದುಕೊಂಡ ಭೂಮಿಯನ್ನು ಕೆಲವರು ಸರಿಯಾಗಿ ಬಳಸಿಕೊಂಡಿಲ್ಲ. ಖಾಲಿ ಇರುವ ಭೂಮಿಯನ್ನು ಉದ್ದೇಶಿತ ಕೈಗಾರಿಕೆ ಸ್ಥಾಪಿಸಲು ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿ ಭೂಮಿ ಪಡೆದವರಿಗೆ ಮೂರು ಬಾರಿ ನೋಟಿಸ್ ನೀಡಲಾಗುತ್ತದೆ. ಆಗಲೂ ಅವರು ಎಚ್ಚೆತ್ತುಕೊಳ್ಳದಿದ್ದರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಗುಜರಾತ್‍ನವರಿಂದ ರಿಯಲ್ ಎಸ್ಟೇಟ್:
ತುಮಕೂರಿನ ವಸಂತ ನರಸಾಪುರ ಬಳಿ ಕೈಗಾರಿಕೆಗಾಗಿ 13,700 ಎಕರೆ ಭೂಮಿಯನ್ನು ಸ್ವಾಧೀನ ಮಾಡಲಾಗಿದೆ. ಅದರಲ್ಲಿ 2,700 ಎಕರೆ ಭೂಮಿಯನ್ನು ಸಣ್ಣ ಕೈಗಾರಿಕೆಗೆ ನೀಡಬೇಕಿತ್ತು. ಆದರೆ ಆ ಭೂಮಿಯನ್ನು ನೀಡಿಲ್ಲ. ಕೈಗಾರಿಕೆಗಾಗಿ ಭೂಮಿ ಕೊಟ್ಟ ರೈತರ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಆದರೆ ಶೇ.70ರಷ್ಟು ಭೂಮಿ ಖಾಲಿ ಇದೆ. ಕೈಗಾರಿಕೆಯೇ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭೂಮಿಯಲ್ಲಿ ಫುಡ್‍ಪಾರ್ಕ್‍ಪ್ರಾರಂಭವಾಗಲಿದೆ. ವಿಶ್ವದ ಎಲ್ಲಾ ಕಡೆಗೆ ಸಂಸ್ಕರಿಸಿದ ಆಹಾರ ಸರಬರಾಜನ್ನು ಮಾಡಲಾಗುತ್ತದೆ. ಬಹಳಷ್ಟು ಮಂದಿಗೆ ಉದ್ಯೋಗ ದೊರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ವೇಳೆ ಭಾಷಣದಲ್ಲಿ ತಿಳಿಸಿದ್ದರು. ಆದರೆ ಇದುವರೆಗೂ ಇಲ್ಲಿ ಕೈಗಾರಿಕೆಯೇ ಪ್ರಾರಂಭವಾಗಲಿಲ್ಲ ಎಂದು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಗುಜರಾತ್‍ನವರು ಎಕರೆಗೆ 60 ಲಕ್ಷದಂತೆ ಬಂಡವಾಳ ಹಾಕಿ ಈ ಭಾಗದಲ್ಲಿ ಭೂಮಿ ಪಡೆದರು. ಆದರೆ ಕೈಗಾರಿಕೆಗಳ ಬದಲಾಗಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ. ಎಕರೆಗೆ 2 ಕೋಟಿಯಂತೆ ಗುಜರಾತ್‍ನವರು ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ತನಿಖೆ: ತುಮಕೂರು ಜಿಲ್ಲೆ ಶಿರಾ ಬಳಿ 13 ವರ್ಷಗಳ ಹಿಂದೆ ಸಣ್ಣ ಕೈಗಾರಿಕೆಗಳಿಗಾಗಿ 31 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಅದರಲ್ಲಿ 29 ಎಕರೆಯನ್ನು ಮುಂಬೈ ಮೂಲದ ಉದ್ಯಮಿಗೆ ಮಂಜೂರು ಮಾಡಲಾಗಿದೆ. ಆ ರೀತಿ ಒಬ್ಬ ವ್ಯಕ್ತಿಗೆ ಭೂಮಿ ಮಂಜೂರು ಮಾಡಲು ಸಣ್ಣ ಕೈಗಾರಿಕೆಯಲ್ಲಿ ಅವಕಾಶ ಇಲ್ಲ. ಮಂಜೂರಾದ ಭೂಮಿಯನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು. ಆದರೆ ಮುಂಬೈ ಉದ್ಯಮಿ ಕೋರ್ಟ್‍ಗೆ ಹೋಗಿದ್ದು, ಇದು ತಕರಾರಿನಲ್ಲಿದೆ. ಹಾಗಾಗಿ ಈ ಪ್ರಕರಣದಲ್ಲಿ ಅಧಿಕಾರದಲ್ಲಿ ಶಾಮೀಲಾಗಿರುವುದು ಕಂಡುಬರುತ್ತಿದೆ. ಆದ್ದರಿಂದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಶಿರಾದಲ್ಲಿ 1700 ಎಕರೆ ಭೂಮಿಯನ್ನು ಮತ್ತೊಂದು ಕೈಗಾರಿಕೆ ಸ್ಥಾಪಿಸಲು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಣ್ಣ ಕೈಗಾರಿಕಾ ಇಲಾಖೆಯನ್ನು ಪ್ರತ್ಯೇಕ ಸಚಿವಾಲಯವನ್ನಾಗಿ ಘೋಷಿಸಿದ್ದರು. ಇದನ್ನು ಶೀಘ್ರ ಜಾರಿಗೆ ತೆರಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಚರ್ಚಿಸುತ್ತೇನೆ ಎಂದು ಸಚಿವರು ತಿಳಿಸಿದರು. ಇಲಾಖೆಯಲ್ಲಿ 400 ರಿಂದ 500 ಕೋಟಿ ಹಣ ಇದೆ. ಅದನ್ನು ಖರ್ಚು ಮಾಡದೆ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದಾರೆ. ಇದು ಸದ್ಬಳಕೆಯಾಗಬೇಕಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin