ದರೋಡೆ ಮಾಡಿದ್ದ 57 ಲಕ್ಷ ಮೌಲ್ಯದ ಸ್ಮಾರ್ಟ್ ವಾಚ್ ವಶ, ಖತರ್ನಾಕ್ ಖದೀಮರ ಬಂಧನ

Social Share

ಬೆಂಗಳೂರು, ಜ.24- ಟೆಂಪೊ ಅಡ್ಡಗಟ್ಟಿ ಟೈಟಾನ್ ಕಂಪೆನಿಯ ವಾಚ್ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರನ್ನು ಆರ್ಆರ್ ನಗರ ಠಾಣೆ ಪೊಲೀಸರು ಬಂಧಿಸಿ 57 ಲಕ್ಷ ಮೌಲ್ಯದ 1282 ಟೈಟಾನ್ ಸ್ಮಾರ್ಟ್ ವಾಚ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಝಮೀದ್ ಅಹಮದ್ ಅಲಿಯಾಸ್ ಝಮೀರ್(28) ಮತ್ತು ಸೈಯ್ಯದ್ ಶಾಹಿದ್ ಅಲಿಯಾಸ್ ಶಾಹಿದ್(26) ಬಂತ ಆರೋಪಿಗಳು.ಅಶೋಕ್ ಲೆಲ್ಯಾಂಡ್ ಟೆಂಪೊದಲ್ಲಿ ಕೋಲಾರದ ಮಾಲೂರಿನ ಪ್ಲಿಪ್ಕಾರ್ಟ್ ಮೂಲಕ 57 ಲಕ್ಷ ಬೆಲೆಬಾಳುವ

ಟೈಟಾನ್ ಕಂಪೆನಿಯ 23 ಬಾಕ್ಸ್(1282) ಟೈಟಾನ್ ವಾಚ್ಗಳನ್ನು ಲೋಡ್ ಮಾಡಿ ಜವರೇಗೌಡ ನಗರದಲ್ಲಿರುವ ಜಯದೀಪ್ ಎಂಟರ್ಪ್ರೈಸಸ್ ಎಂಬ ಕೋರಿಯರ್ ಕಚೇರಿ ಮುಂದೆ ಜನವರಿ 15ರಂದು ನಿಲ್ಲಿಸಲಾಗಿತ್ತು.

ಅದೇ ದಿನ ರಾತ್ರಿ 10 ಗಂಟೆ ಸಮಯದಲ್ಲಿ ಕೋರಿಯರ್ನ ವೇರ್ಹೌಸ್ನಲ್ಲಿ ಕೆಲಸ ಮಾಡುವ ಜಾನ್ ಮತ್ತು ಬಿಸಾಲ್ಕಿಸಾನ್ ಎಂಬುವರು ಸಿಗರೇಟ್ ತರಲೆಂದು ವಾಚ್ಗಳನ್ನು ಸಂಗ್ರಹಿಸಿಟ್ಟಿದ್ದ ವಾಹನವನ್ನು ತೆಗೆದುಕೊಂಡು ನಾಯಂಡನಹಳ್ಳಿಗೆ ಹೋಗಿ ರಾತ್ರಿ ಸುಮಾರು 10.30ರಿಂದ 10.45ರ ಮಧ್ಯೆ ರಾಜಾರಾಜೇಶ್ವರಿ ನಗರದ ಜವರೇಗೌಡನದೊಡ್ಡಿ ರಸ್ತೆಯ ಮಹಾರಾಜ ಬಾರ್ ಬಳಿ ಬರುತ್ತಿದ್ದಾಗ ಒಂದು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದ ಸುಮಾರು 25ರಿಂದ 30 ವರ್ಷ ವಯಸ್ಸಿನ ಐದಾರು ಮಂದಿ ದರೋಡೆಕೋರರು ಟೆಂಪೊವನ್ನು ಅಡ್ಡಗಟ್ಟಿ ಜಾನ್ ಮತ್ತು ಬಿಸಾನ್ನನ್ನು ಟೆಂಪೋದಿಂದ ಕೆಳಗಿಳಿಸಿ ಅವರ ಮೇಲೆ ಹಲ್ಲೆ ಮಾಡಿದಾಗ ಇವರಿಬ್ಬರು ದರೋಡೆಕೋರರಿಂದ ತಪ್ಪಿಸಿಕೊಂಡಿದ್ದಾರೆ.

ಆ ವೇಳೆ ದರೋಡೆಕೋರರು ಟೆಂಪೋದಲ್ಲಿದ್ದ ಸುಮಾರು 57 ಲಕ್ಷ ಬೆಲೆಬಾಳುವ ಟೈಟಾನ್ ಕಂಪೆನಿಯ 23 ಬಾಕ್ಸ್ ವಾಚ್ಗಳನ್ನು ತೆಗೆದುಕೊಂಡು ಪರಾರಿಯಾಗಿರುತ್ತಾರೆಂದು ಆರ್ಆರ್ ನಗರದ ಜವರೇಗೌಡ ನಗರದಲ್ಲಿರುವ ಜಯದೀಪ್ ಎಂಟರ್ಪ್ರೈಸಸ್ ಎಂಬ ಕೊರಿಯರ್ ಕಚೇರಿಯ ವೇರ್ಹೌಸ್ ಮ್ಯಾನೇಜರ್ ಹನುಮೇಗೌಡ ದೂರು ನೀಡಿದ್ದರು.

ಡಕಾಯಿತಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ಕೈಗೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಮ್ಮ ದ್ವಿಚಕ್ರ ವಾಹನಕ್ಕೆ ಟೆಂಪೋ ಚಾಲಕ ಜಾನ್ ತಾಗಿಸಿಕೊಂಡು ಹೋಗಿದ್ದರಿಂದ ಟೆಂಪೋ ವಾಹನವನ್ನು ಓವರ್ಟೇಕ್ ಮಾಡಿ ಅವರಿಗೆ ಹೊಡೆದು ಟೆಂಪೋ ವಾಹನದಲ್ಲಿದ್ದ ಮಾಲಿನ ಸಮೇತ ಹೊರಟುಹೋಗಿ ಕೆಲ ಸಮಯದ ನಂತರ ಮಾಲನ್ನು ತೆಗೆದುಕೊಂಡು ಖಾಲಿ ಟೆಂಪೋ ವಾಹನವನ್ನು ಮಾತ್ರ ತಂದು ಅದೇ ಸ್ಥಳದಲ್ಲಿ ಬಿಟ್ಟುಹೋಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

ಆರೋಪಿಗಳಿಂದ 57 ಲಕ್ಷ ರೂ. ಮೌಲ್ಯದ 1282 ಟೈಟಾನ್ ಸ್ಮಾರ್ಟ್ ವಾಚ್ಗಳನ್ನು ಆರೋಪಿಗಳ ಗೋದಾಮು ಹಾಗೂ ಇತರೆ ಕಡೆಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭರತ್ ಎಸ್. ರೆಡ್ಡಿ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶಿವಣ್ಣ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article