ರಾಕಿ ಬಾಯ್ ಶೈಲಿಯಲ್ಲಿ ಸಿಗರೇಟು ಸೇದಿ ಬಾಲಕ ಅಸ್ವಸ್ಥ

Spread the love

ಹೈದರಾಬಾದ್: ಕೆಜಿಎಫ್-2ರಲ್ಲಿ ರಾಕಿ ಬಾಯ್ ಪಾತ್ರಧಾರಿಯಿಂದ ಪ್ರಭಾವಿತನಾದ ಅಪ್ರಾಪ್ತ ಬಾಲಕನೊಬ್ಬ ಅದೇ ಶೈಲಿಯಲ್ಲಿ ಒಂದು ಪ್ಯಾಕ್ ಸಿಗರೇಟ್‍ಅನ್ನು ಪೂರ್ತಿ ಸೇದಿ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾದ ಪ್ರಕರಣ ವರದಿಯಾಗಿದೆ.

ಕೆಜಿಎಫ್‍ನಲ್ಲಿ ರಾಕಿ ಪಾತ್ರಧಾರಿ ಯಶ್ ಸಿಗರೇಟ್ ಸೇದುವ ಶೈಲಿ ಜನಪ್ರಿಯವಾಗಿತ್ತು. ಅದನ್ನು ಅನುಸರಿಸಿದ 15 ವರ್ಷದ ಬಾಲಕ ಒಂದು ಪ್ಯಾಕ್ ಸಿಗರೇಟ್ ಅನ್ನು ಪೂರ್ತಿಯಾಗಿ ಸೇದಿದ್ದಾನೆ. ಇದರಿಂದ ಆತನ ಗಂಟಲಿಗೆ ಹಾನಿಯಾಗಿದ್ದು, ಕೆಮ್ಮು ತೀವ್ರಗೊಂಡಿದೆ. ಅಸ್ವಸ್ಥಗೊಂಡ ಬಾಲಕನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಆತನಿಗೆ ಆಪ್ತ ಸಮಾಲೋಚನಾ ಸೌಲಭ್ಯವನ್ನು ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೈದರಾಬಾದ್‍ನ ಶ್ವಾಸ ಕೋಶತಜ್ಞ ಡಾ.ರೋಹಿತ್ ರೆಡ್ಡಿಪಥೌರಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಮಕ್ಕಳು ರಾಕಿ ಬಾಯ್ ನಂತಹ ಪಾತ್ರಗಳಿಂದ ಬೇಗ ಪ್ರಭಾವಿತರಾಗುತ್ತಾರೆ. ಈ ಪ್ರಕರಣದಲ್ಲಿ ಒಂದು ಪ್ಯಾಕ್ ಸಿಗರೇಟ್‍ಅನ್ನು ನಿರಂತರವಾಗಿ ಸೇದಿರುವ ಬಾಲಕ ಹಲವು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾನೆ.

ಸಿನಿಮಾಗಳು ಪ್ರಭಾವಿತ ಮಾಧ್ಯಮ, ಚಲನಚಿತ್ರ ತಯಾರಕರು ಮತ್ತು ನಟರು ಸಾಮಾಜಿಕ ಜವಾಬ್ದಾರಿ ನಿಭಾಯಿಸಬೇಕು. ಪ್ರಮುಖ ಪಾತ್ರಧಾರಿಯಿಂದ ಸಿಗರೇಟು ಸೇದಿಸುವುದು, ಗುಟ್ಕಾ ಅಗೆಸುವುದು, ಮದ್ಯಪಾನ ಮಾಡಿಸುವುದು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಪೋಷಕರು ಮಕ್ಕಳು ಚಲನಚಿತ್ರದ ಯಾವ ದೃಶ್ಯಗಳಿಂದ ಪ್ರಭಾವಿತರಾಗುತ್ತಿದ್ದಾರೆ ಎಂಬುದರ ಮೇಲೆ ನಿಗಾ ವಹಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಕನ್ನಡದ ಕೆಜಿಎಫ್ ಬಹುಭಾಷೆ ಗಳಲ್ಲಿ ನಿರ್ಮಾಣಗೊಂಡು ಪ್ಯಾನ್ ಇಂಡಿಯಾ ಸಿನಿಮಾವಾಗಿ ಭರ್ಜರಿ ಯಶಸ್ಸು ಗಳಿಸಿದೆ. ನಟ ಯಶ್ ನಟಿಸಿ, ಪ್ರಶಾಂತ ನೀಲ್ ನಿರ್ದೇಶಿಸಿ, ವಿಜಯ್ ಕಿರಗಂದೂರು ಕೆಜಿಎಫ್ ಅನ್ನು ನಿರ್ಮಿಸಿದ್ದಾರೆ.

Facebook Comments