ಬೆಂಗಳೂರು,ಡಿ.15- ಆಧುನಿಕತೆ, ತಂತ್ರಜ್ಞಾನ ಹೆಚ್ಚಾದಂತೆಲ್ಲಾ ವಂಚನೆಯ ಸ್ವರೂಪಗಳು ಬದಲಾಗುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಅಪರಾಧ ಬೇರೆಯದೇ ಸ್ಥರಕ್ಕೆ ತಲುಪಿದೆ. ತಮ್ಮ ಪಾಡಿಗೆ ತಾವಿದ್ದವರನ್ನು ಕೆಣಕ್ಕಿ ಕ್ರೈಂ ಮಾಡುವ ಅಂತರ್‍ಜಾಲದ ಕಾಳಕೋರರು ಪೊಲೀಸ್ ವ್ಯವಸ್ಥೆಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಸುವವರು ಅದರಲ್ಲೂ ಹೆಣ್ಣು ಮಕ್ಕಳು ಬಹಳ ಎಚ್ಚರಿಕೆಯಿಂದ ಇರದ ಹೊರತು ಅಪಾಯ ಕಟ್ಟಿಟ್ಟ ಬುತ್ತಿಯಾಗಲಿದೆ. ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಜನ ಸಾಮಾನ್ಯರ ನಿದ್ದೆ ಗೆಡಿಸುತ್ತಿವೆ.
ಇನ್ಸಟಾಗ್ರಾಮ್, ಫೆಸ್‍ಬುಕ್, ಟ್ವೀಟರ್ ನಂತಹ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರು ಸ್ವಲ್ಪ ಯಾಮಾರಿದರೂ ಮಾನ ಹರಾಜಾಗಲಿದೆ. ಖಾತೆಗೆ ಕನ್ನ ಬೀಳಲಿದೆ. ತಮ್ಮ ಇನ್ಸಾಗ್ರಾಮ್ ಖಾತೆಯಿಂದ ಫೋಟೋಗಳನ್ನು ಕದ್ದು ಅಶ್ಲೀಲವಾಗಿ ಬದಲಾಯಿಸಿ ಅಂತರ್ಜಾಲದಲ್ಲಿ ಹರಿಯ ಬಿಡಲಾಗಿದೆ ಎಂದು ಬಹಳಷ್ಟು ಮಹಿಳೆಯರು ದೂರು ನೀಡಿದ್ದಾರೆ.
ಕೆಪಿ ಅಗ್ರಹಾರದ ಯುವತಿಯೊಬ್ಬರು ಇನ್ಸಟಾಗ್ರಾಮ್‍ನಲ್ಲಿ ಖಾತೆ ಹೊಂದಿದ್ದು, ಅಪರಿಚಿತರು ನಕಲಿ ಖಾತೆ ಸೃಷ್ಟಿಸಿ ಆಕೆಯ ಖಾತೆಯಿಂದ ಫೋಟೋಗಳನ್ನು ಕದ್ದು ಸಂಬಂಧಿಕರಿಗೆ ಕಳುಹಿಸಿದ್ದಾರೆ. ಖಾಸಗಿ ಫೋಟೋಗಳು ಹಂಚಿಕೆಯಾಗಿದ್ದರಿಂದ ಯುವತಿ ಅವಮಾನದಿಂದ ಕುಗ್ಗಿ ಹೋಗಿದ್ದು, ಸಮಾಜಕ್ಕೆ ಮುಖ ತೋರಿಸಲಾಗದೆ ನರಳಾಡುವಂತಾಗಿದೆ.
ಅಂತರ್ಜಾತಿ ವಿವಾಹವಾದವರ ಮಾಹಿತಿ ಸಂಗ್ರಹಕ್ಕೆ ಮುಂದಾದ ಮಹಾರಾಷ್ಟ್ರ
ಅಂದ್ರಹಳ್ಳಿಯ ನಿವಾಸಿಯೊಬ್ಬರು ತಮ್ಮ ಪತ್ನಿಯ ಇನ್ಸಟಾಗ್ರಾಂ ಹಾಗೂ ಫೇಸ್‍ಬುಕ್ ಖಾತೆಯಿಂದ ಕೆಲವು ಖಾಸಗಿ ಫೋಟೋಗಳನ್ನು ಕದ್ದು, ನಕಲಿ ಖಾತೆಗಳ ಮೂಲಕ ಸಂಬಂಧಿಕರಿಗೆ ರವಾನಿಸಿದ್ದಾರೆ. ಜೊತೆಗೆ ಅಶ್ಲೀಲ ಸಂದೇಶವೂ ಹೋಗಿದೆ. ಫೋಟೋವನ್ನು ಅಸಭ್ಯವಾಗಿ ಎಡಿಟ್ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.
ಕಮಲಾನಗರದ ಪ್ರವೀಣ್ ಎಂಬ 29 ವರ್ಷದ ಯುವಕನಿಗೆ ಇನ್ಸಟಾಗ್ರಾಮ್ ಶಾಕ್ ನೀಡಿತ್ತು. ಕೆಕೆಪಿ ಟ್ರೋಲ್ ಬಾಯ್ಸ್ ಹೆಸರಿನಲ್ಲಿ ನಕಲಿ ಖಾತೆಯೊಂದು ಪ್ರವೀಣನ ಫೋಟೋ ಬಳಸಿ ಮತ್ತೆ ಹುಟ್ಟಿ ಬರಬೇಡ ಕಾಮುಕ, ಭಾವಪೂರ್ಣ ಶ್ರದ್ಧಾಂಜಲಿ ಎಂದು ಫೋಸ್ಟ್ ಹಾಕಿದೆ. ಅಷ್ಟು ಸಾಲದಂತೆ ಪ್ರವೀಣನ ಹಾಗೂ ಆತ ಕೆಲಸ ಮಾಡುವ ಸಂಸ್ಥೆಯ ವಿರುದ್ಧವೂ ಕೆಟ್ಟದಾಗಿ ಅಪಪ್ರಚಾರ ನಡೆಸಲಾಗಿದೆ.
ಮೂರು ದಿನಗಳ ಬಳಿಕ ಅಪರಿಚಿತ ನಂಬರ್‍ನಿಂದ ಕರೆಯೊಂದು ಬಂದಿದೆ. ಇವತ್ತು ನಿನ್ನ ಎಂಗೇಜ್‍ಮೆಂಟ್, ನೀನು ಮದುವೆಯನ್ನಾದರೂ ಆಗು, ಎಂಗೇಜ್‍ಮೆಂಟ್ ಆದರೂ ಮಾಡಿಕೋ. ಆದರೆ ನಿನ್ನ ಹುಡುಗಿಯ ಜೊತೆ ನನ್ನ ಫಸ್ಟ್ ನೈಟ್ ಎಂದು ಹೇಳಿ ಕರೆ ಕಟ್ ಮಾಡಲಾಗಿದೆ. ಮತ್ತೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ, ಪ್ರಾಣ ಬೆದರಿಕೆ ಹಾಕಿರುವ ಕುರಿತು ದೂರು ದಾಖಲಾಗಿದೆ.
ವಿಜಯನಗರದಲ್ಲಿ ನವೀನ್ ಎಂಬುವರಿಗೆ ಸ್ನೇಹಿತರ ಫೋಟೋ ಡಿಪಿ ಇದ್ದ ವಾಟ್ಸ್‍ಅಪ್‍ನಿಂದ ಮೆಡಿಕಲ್ ಎಮರ್ಜೆನ್ಸಿ, ತಕ್ಷಣ ಹಣ ಬೇಕು ಎಂದು ಸಂದೇಶ ಬಂದಿದೆ. ಫೋಟೋ ನೋಡಿ ತನ್ನ ಸ್ನೇಹಿತನೇ ಎಂದು ನಂಬಿದ ನವೀಣ್ ಪೇ ಟಿಎಂ ಮೂಲಕ 99 ಸಾವಿರ ರೂಪಾಯಿಗಳನ್ನು ಕಳುಹಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ತಾವು ಹಣ ಕಳುಹಿಸಿದ್ದ ವಂಚಕನಿಗೆ ಎಂಬುದು ಅರಿವಾಗಿದೆ. ಮೆಡಿಕಲ್ ಎಮರ್ಜೆನ್ಸಿ ಎಂದು ಹೇಳಿದ್ದರಿಮದ ಹೆಚ್ಚು ಸಮಯ ವ್ಯರ್ಥ ಮಾಡದೆ ನವೀನ್ ನೆರವು ನೀಡಲು ಮುಂದಾಗಿದ್ದಾರೆ. ಅವರ ಒಳ್ಳೆಯತನವನ್ನು ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ.
ಮತ್ತೊಂದು ವಿಚಿತ್ರ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಿಷಿಯನ್ ಕೆಲಸ ಮಾಡುವ ವಿವೇಕ್ ನಗರದ ನಾಗರಾಜ ಎಂಬುವರು ಲಾರ್ಗೆ ಟಕಾ ಮತ್ತು ವಂಡರ್ ಲೋನ್ ಎಂಬ ಖಾಸಗಿ ಆಪ್‍ಗಳಿಂದ 85 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ ಬಡ್ಡಿ ಸಮೇತ್ 1.25 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದ್ದರು. ಸಾಲ ತೀರಿ ಹೋಗಿದೆ ಎನ್ನುತ್ತಿದ್ದಂತೆ ಸಾಲ ಕೇಳದೆ ಇದ್ದರೂ ಖಾಸಗಿ ಆಪ್‍ನವರು ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ.
ಮತ್ತೆ ಅದನ್ನು ಕಂತಿನ ರೂಪದಲ್ಲಿ ತೀರಿಸುವಂತೆ ಬೆನ್ನು ಹತ್ತಿದ್ದಾರೆ. ಬೇರೆ ಬೇರೆ ಆ್ಯಪ್‍ಗಳ ಮೂಲಕ ನಿರಂತರವಾಗಿ ಸಂದೇಶಗಳು ಬರಲಾರಂಭಿಸಿವೆ. ಆಧಾರ್ ಕಾರ್ಡ್‍ನಲ್ಲಿದ್ದ ಫೋಟೋವನ್ನೇ ಅಶ್ಲೀಲವಾಗಿ ಎಡಿಟ್ ಮಾಡಿ ನಾಗರಾಜ್ ಮೊಬೈಲ್ ನ ಕಾಂಟ್ಯಾಕ್ಟ್ ಲಿಸ್ಟ್‍ನಲ್ಲಿದ್ದ ಎಲ್ಲರಿಗೂ ಕಳುಹಿಸಲಾಗಿದೆ. ಸಾಲ ನೀಡುವ ಆ್ಯಪ್ ಸಂಸ್ಥೆಗಳು ಇದೇ ರೀತಿ ನಿರಂತರವಾಗಿ ಕಿರುಕೂಳ ನೀಡುತ್ತಿವೆ ಎಂದು ನಾಗರಾಜ್ ದೂರು ನೀಡಿದ್ದಾರೆ.
ಈ ರೀತಿ ಒಂದಿಲ್ಲೊಂದು ವಿಚಿತ್ರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇನ್ನೂ ಕೆಲಸ ಕೊಡಿಸುತ್ತೇವೆ ಎಂಬು ಹಣ ಪೀಕುವ ಆ್ಯಪ್‍ಗಳು, ವಧು-ವರರನ್ನು ಹುಡುಕಿಕೊಡುವುದಾಗಿ ನಂಬಿಸಿ ವಂಚಿಸುವ ದೂರುಗಳು, ಎಸ್ಕಾರ್ಟ್ ಸೇವೆಯ ಹೆಸರಿನಲ್ಲಿ ನಡೆಯುವ ಅತ್ಯಾಧುನಿಕ ವೇಶ್ಯಾವಾಟಿಕೆ ದಂಧೆಯಲ್ಲಿನ ಮೋಸಗಳು, ಒಟಿಪಿ ಮತ್ತು ಲಿಂಕ್ ಕಳುಹಿಸಿ ಖಾತೆಗೆ ಕನ್ನ ಹಾಕುವುದು ನಿರಂತರವಾಗಿ ವರದಿಯಾಗುತ್ತಲೇ ಇವೆ.
ವಿಶ್ವಕಪ್ ಫೈನಲ್‍ಗೆ ಲಗ್ಗೆಯಿಟ್ಟ ಫ್ರಾನ್ಸ್
ಈ ಎಲ್ಲಾ ಪ್ರಕರಣಗಳು ಸಣ್ಣ ಉದಾಹರಣೆಗಳಿವೆ, ಹೇಳಲಾಗದ, ದಾಖಲಾಗದ ಬಹಳಷ್ಟು ಪ್ರಕರಣಗಳು ಹಾಗೇ ಉಳಿದಿವೆ. ಎಲ್ಲ ಪ್ರಕರಣಗಳಲ್ಲೂ ಆರೋಪಿಗಳು ಅದೃಶ್ಯರಾಗಿರುವುದು ಅಥವಾ ದೂರದಲ್ಲಿ ಎಲ್ಲೊ ಕುಳಿತು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಪತ್ತೆ ಕಾರ್ಯ ಕಷ್ಟ ಸಾಧ್ಯವಾಗಿದೆ. ಕೆಲವೊಮ್ಮೆ ಅಪರಾಧಿಯ ಮೂಲ ಸಿಕ್ಕರೂ ಅಲ್ಲಿಗೆ ಹೋಗಿ ಬರುವ ವೆಚ್ಚಗಳು ಮತ್ತು ಅಲ್ಲಿ ಎದುರಾಗ ಬಹುದಾದ ಅಪಾಯಗಳು ಪೊಲೀಸರನ್ನು ಕಂಗೇಡಿಸಿವೆ.
ಕಾನೂನು ಮತ್ತು ಸುವ್ಯವಸ್ಥೆಯ ಠಾಣೆಗಳಲ್ಲಿ ವರ್ಷಕ್ಕೆ 500 ಪ್ರಕರಣ ದಾಖಲಾದರೆ ಸೈಬರ್ ಕ್ರೈಮ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಸಾವಿರದ ಐದನೂರುಕ್ಕೂ ಹೆಚ್ಚಿದೆ. ಬಹುತೇಕ ದಾಖಲಾಗುವ ಎಲ್ಲಾ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ವರ್ಷಗಳ ದುಡಿಮೆಯನ್ನು ದುಷ್ಕರ್ಮಿಗಳು ಕ್ಷಣ ಮಾತ್ರದಲ್ಲಿ ಎಗ್ಗರಿಸಿರುತ್ತಾರೆ.
ಹುಟ್ಟಿದಾಗಿನಿಂದ ಕಾಯ್ದುಕೊಂಡು ಬಂದಿದ್ದ ಗೌರವಾಧಾರಗಳನ್ನು ಒಂದು ಫೋಟೋ ಎಡಿಟ್ ಮೂಲಕ ಕಳೆದು ಹಾಕಿ ಬಿಡಲಾಗುತ್ತದೆ. ಎಷ್ಟೆ ಎಚ್ಚರಿಕೆಯಿಂದಿದ್ದರೂ ಬೆನ್ನು ಬಿದ್ದು ಕಾಡುವ ನಕ್ಷತ್ರಿಕನಂತಹ ಈ ಪಿಡುಗನ್ನು ಹದ್ದು ಬಸ್ತಿನಲ್ಲಿಡಲು ಪೊಲೀಸ್ ಇಲಾಖೆಯನ್ನು ಸಜ್ಜುಗೊಳಿಸಬೇಕಿದೆ. ಹೆಚ್ಚು ಅನುದಾನ ಒದಗಿಸಿ ಮೂಲಸೌಲಭ್ಯಗಳನ್ನು ಒದಗಿಸಬೇಕಿದೆ. ಕಾನೂನು ಸುವ್ಯವಸ್ಥೆಗೆ ನೀಡುವುದಕ್ಕಿಂತಲೂ ಹೆಚ್ಚಿನ ಆದ್ಯತೆ ಸೈಬರ್ ಅಪರಾಧ ಪತ್ತೆಗೆ ನೀಡಬೇಕಿದೆ.
ಬಹಳಷ್ಟು ಪ್ರಕರಣಗಳಲ್ಲಿ ಸಂತ್ರಸ್ಥರು ಹೇಳಿಕೊಳ್ಳಲು ಮುಂದೆ ಬರದೆ ನೋವು ಮತ್ತು ನಷ್ಟಗಳನ್ನು ಅನುಭವಿಸಿ ಸುಮ್ಮನಾಗುತ್ತಿದ್ದಾರೆ. ಸೈಬರ್ ಕೂಳರ ಹಾವಳಿ ತೀವ್ರ ಸ್ವರೂಪದ್ದಾಗಿದ್ದಾಗ ಮಾತ್ರವೇ ಠಾಣೆ ಮೆಟ್ಟಿಲು ಹತ್ತುತ್ತಾರೆ.
ಸೈಬರ್ ಅಪರಾಧಗಳು ಮತ್ತು ಅವುಗಳ ಪರಿಹಾರದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಓಟಿಪಿ ಆಧರಿಸಿ ಹಣ ಕಳ್ಳತನವಾದಾಗ ತಕ್ಷಣ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದರೆ ಹಣ ವರ್ಗಾವಣೆಯನ್ನು ತಡೆಯಲು ಸಾಧ್ಯವಿದೆ. ಆದರೆ ಆ ವಿಧಾನ ಬಹುತೇಕ ಗೋತ್ತೆ ಇಲ್ಲ.
ಇನ್ನೂ ಸಾಮಾಜಿಕ ಜಾಲ ತಾಣದಲ್ಲಿ ಎಲ್ಲ ಸಕ್ರಿಯವಾಗಿರುವವರು ಫೋಟೋ ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರದಿಂದಿರುವ ಅಗತ್ಯವಿದೆ. ಹೆಣ್ಣು ಮಕ್ಕಳ ವಾಟ್ಸ್‍ಅಪ್ ಡಿಪಿಯಲ್ಲಿನ ಫೋಟೋಗಳನ್ನೇ ಕದ್ದು ಕೆಟ್ಟದಾಗಿ ಎಡಿಟ್ ಮಾಡುವ ದುಷ್ಕರ್ಮಿಗಳಿರುವಾಗ ಪೂರ್ತಿ ಫೋಟೋ ಹಾಕಿದರೆ ಕೇಳಬೇಕೆ.
ಹಾಗಾಗಿ ಪ್ರತಿಯೊಬ್ಬರು ಖಾಸಗಿ ವಲಯಕ್ಕೆ ಸೀಮಿತವಾಗಿ ಫೋಟೋ ಹಾಗೂ ಇತರ ವಿಷಯಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗಿರಬೇಕಿದೆ.
Social media, user, fraud, crime,