ಬೆಂಗಳೂರು,ಡಿ.24- ಮಹಿಳಾ ಸಾಫ್ಟವೇರ್ ಇಂಜಿನಿಯರ್ ಒಬ್ಬರು ಕಳೆದುಕೊಂಡಿದ್ದ ಪೆನ್ಡ್ರೈವ್ನಲ್ಲಿದ್ದ ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಯತ್ನಿಸಿದ ಆರೋಪಿಯನ್ನು ನಗರದ ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಶೋಯಬ್ ಅಹಮದ್ ಬಂಧಿತ ಆರೋಪಿ. ಬೇಗೂರು ರಸ್ತೆಯಲ್ಲಿ ವಾಸಿಸುತ್ತಿದ್ದ 25 ವರ್ಷದ ಸಾಫ್ಟವೇರ್ ಇಂಜಿನಿಯರ್ ಒಬ್ಬರು ತಮ್ಮ ಪೆನ್ಡ್ರೈವ್ ಕಳೆದುಕೊಂಡಿದ್ದರು. ಅದು ಆರೋಪಿ ಶೋಯಬ್ಗೆ ಸಿಕ್ಕಿದೆ.
ಅದರಲ್ಲಿದ್ದ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಯುವತಿಗೆ ಕಳುಹಿಸಿದ್ದ ಈ ಆರೋಪಿಹಣ ನೀಡುವಂತೆ ಬ್ಲಾಕ್ಮೇಲ್ ಮಾಡಲಾರಂಭಿಸಿದ್ದ. ಆತನ ಕಿರುಕುಳ ಸಹಿಸಲಾಗದೆ ಆಕೆ ಅಕ್ಟೋಬರ್ 30ರಂದು ಪೊಲೀಸರಿಗೆ ದೂರು ನೀಡಿದರು.
ವ್ಯಕ್ತಿಯೊಬ್ಬ ಪೆನ್ಡ್ರೈವ್ನಲ್ಲಿ ಖಾಸಗಿ ಫೋಟೋಗಳನ್ನು ನನ್ನ ವಾಟ್ಸ್ಅಪ್ಗೆ ಕಳುಹಿಸಿ ಪೆನ್ಡ್ರೈವ್ ವಾಪಾಸ್ ಬೇಕಾದರೆ 70 ಸಾವಿರ ರೂಪಾಯಿ ಹಣ ನೀಡಬೇಕು ಎಂದು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿದ್ದು ಹಣ ಹಾಕಲು ಒತ್ತಡ ಹಾಕುತ್ತಿದ್ದಾನೆ ಎಂದು ದೂರಿದರು.
ಸರಿಸುಮಾರು ಎರಡೂವರೆ ತಿಂಗಳಿನಿಂದ ಪ್ರಕರಣದ ಬೆನ್ನತ್ತಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಪೆನ್ಡ್ರೈವ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸಿಪಿ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ, ಎಸಿಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಲಹೆ ಮೇರೆಗೆ ಇನ್ಸ್ಪೆಕ್ಟರ್ ಎಸ್.ಟಿ.ಯೋಗೇಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
software engineer, blackmail, pen drive, arrested,