ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದ ಎಲ್ಲ 22 ಆರೋಪಿಗಳು ಖುಲಾಸೆ..!

Spread the love

Sohrabuddin

ಮುಂಬೈ, ಡಿ.21 (ಪಿಟಿಐ)-ಕುಖ್ಯಾತ ರೌಡಿ ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿ ಪ್ರಜಾಪತಿ ಅವರ ಎನ್‍ಕೌಂಟರ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲ 22 ಜನರನ್ನು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ.  ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಜೆ. ಶರ್ಮ, ಈ ಪ್ರಕರಣದಲ್ಲಿ ಒಳಸಂಚು ನಡೆದಿದೆ ಎಂಬುದಕ್ಕೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿ ಎಲ್ಲ 22 ಆರೋಪಿಗಳನ್ನು ದೋಷಮುಕ್ತಗೊಳಿಸಿದರು. ಖುಲಾಸೆಗೊಂಡವರಲ್ಲಿ 21 ಮಂದಿ ಗುಜರಾತ್ ಮತ್ತು ಒಬ್ಬರು ರಾಜಸ್ತಾನದ ಕಿರಿಯ ಹಂತದ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಮತ್ತೊಬ್ಬರು ಗುಜರಾತ್‍ನ ತೋಟದ ಮಾಲೀಕರು. ಎನ್‍ಕೌಂಟರ್‍ಗೂ ಮುನ್ನ ಈ ಮೂವರನ್ನು ಇವರ ತೋಟದ ಮನೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಡಲಾಗಿತ್ತು. ಕುಖ್ಯಾತ ರೌಡಿ ಸೊಹ್ರಾಬುದ್ದೀನ್ ಶೇಕ್, ಆತನ ಪತ್ನಿ ಕೌಸರ್ ಬಿ ಮತ್ತು ಸಹಚರ ಪ್ರಜಾಪತಿ ಅವರನ್ನು ಗುಜರಾತ್ ಪೊಲೀಸರು ಅಪಹರಿಸಿದ್ದರು. 2005ರ ನ.22-23ರ ರಾತ್ರಿ ಹೈದರಾಬಾದ್‍ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಈ ಮೂವರು ಬಸ್‍ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಪೊಲೀಸರು ವಾಹನವನ್ನು ಅಡ್ಡಗಟ್ಟಿ ಈ ಮೂವರನ್ನು ಅಪಹರಿಸಿದ್ದರು ಎಂದು ಸಿಬಿಐ ಆರೋಪಿಸಿತ್ತು.

ನ.26ರಂದು ಅಹಮದಾಬಾದ್ ಬಳಿ ಎನ್‍ಕೌಂಟರ್‍ನಲ್ಲಿ ಸೊಹ್ರಾಬುದ್ದೀನ್‍ನನ್ನು ಹತ್ಯೆ ಮಾಡಲಾಗಿತ್ತು. ಮೂರು ದಿನಗಳ ನಂತರ ಆಕೆಯನ್ನು ಕೊಲ್ಲಲಾಗಿತ್ತು ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು. 2006 ಡಿ.27ರಂದು ಸೊಹ್ರಾಬುದ್ದೀನ್ ಸಹಚರ ಪ್ರಜಾಪತಿಯನ್ನು ಗುಜರಾತ್ ಮತ್ತು ರಾಜಸ್ಥಾನ್ ಪೊಲೀಸರು ಈ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಗುಂಡಿಟ್ಟು ಕೊಂದಿದ್ದರು.

ಈ ಪ್ರಕರಣದಲ್ಲಿ ಅಂದಿನ ಗುಜರಾತ್ ಗೃಹಸಚಿವರಾಗಿದ್ದ ಅಮಿತ್ ಷಾ ಅವರ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು. ಈ ಎನ್‍ಕೌಂಟರ್ ಪ್ರಕರಣದಲ್ಲಿ ರಾಜಸ್ಥಾನದ ಕೇಡರ್‍ನ ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರ ಅಳಿಯ ಕೂಡ ಆರೋಪಿಯಾಗಿಯಾಗಿದ್ದರು.

Facebook Comments

Sri Raghav

Admin