ಹೆಚ್ಡಿಕೆ ಅಧಿಕಾರಾವಧಿಯಲ್ಲಿನ ಆಶ್ರಯ ಮನೆಗಳ ಅವ್ಯವಹಾರ ತನಿಖೆ ಆರಂಭವಾಗಿದೆ : ಸಚಿವ ವಿ. ಸೋಮಣ್ಣ

ವಿಜಯಪುರ, ನ.6-ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಎಚ್. ಡಿ.ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿ ಆಶ್ರಯ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ಆರಂಭವಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ 14 ಲಕ್ಷ ಆಶ್ರಯ ಮನೆ ನಿರ್ಮಿಸಲಾಗಿದೆ ಎಂದು ಲೆಕ್ಕಪತ್ರದಲ್ಲಿ ತೋರಿಸಲಾಗಿದೆ.

ಆದರೆ, ಇವೆಲ್ಲ ಕೇವಲ ಕಾಗದದಲ್ಲಿವೆ ಎಂದು ಹೇಳಿದರು. ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳು ಸಿಕ್ಕಿಲ್ಲ. ಎಲ್ಲವೂ ತಮಗೆ ಬೇಕಾದವರಿಗೆ, ಬೆಂಬಲಿಗರಿಗೆ, ಹಣ ಕೊಟ್ಟವರಿಗೆ ನೀಡಲಾಗಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಎಲ್ಲವನ್ನೂ ತನಿಖೆಗೆ ಆದೇಶಿಸಿದ್ದೇನೆ. ನಾಲ್ಕು ದಿನಗಳ ಹಿಂದೆ ತನಿಖೆ ಆರಂಭವಾಗಿದೆ ಎಂದು ವಿ. ಸೋಮಣ್ಣ ತಿಳಿಸಿದರು.

ನೆರೆ ಸಂತ್ರಸ್ತರ ಪರಿಹಾರ ವಿಚಾರ ಕುರಿತು ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ನೀಡಿದಷ್ಟು ಪರಿಹಾರವನ್ನು ಯಾರೂ ನೀಡಿಲ್ಲ. ಎಲ್ಲಾ ರಾಜ್ಯಗಳಲ್ಲೂ ಪ್ರವಾಹ ಬಂದಾಗ ಬಿದ್ದ ಮನೆಗಳಿಗೆ ಕೇವಲ ರೂ. 1 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ, ಸಿಎಂ ಬಿ. ಎಸ್. ಯಡಿಯೂರಪ್ಪ ರೂ. 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಈಗಾಗಲೇ ರೂ.1 ಲಕ್ಷದ ವರೆಗೆ ಪರಿಹಾರ ಸಂತ್ರಸ್ತ ಫಲಾನುಭವಿಗಳಿಗೆ ತಲುಪಿದೆ. ಹಣಕಾಸಿನ ಲೆಕ್ಕಾಚಾರ ನೋಡಿ ಹಂತ ಹಂತವಾಗಿ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ವಿ. ಸೋಮಣ್ಣ ತಿಳಿಸಿದರು.