ಹಳ್ಳಿಯಿಂದ ದಿಲ್ಲಿವರೆಗೂ ಅರಳಿದ ಕಮಲ : ಎಸ್.ಟಿ.ಸೋಮಶೇಖರ್

ಮೈಸೂರು,ಡಿ.31- ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 250 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 4232 ಗ್ರಾಮ ಪಂಚಾಯಿತಿ ಸ್ಥಾನಗಳಿವೆ. ಇದರಲ್ಲಿ 20 ಸ್ಥಾನಗಳು ನಾಮಪತ್ರ ಸಲ್ಲಿಸದೇ ಖಾಲಿ ಇದ್ದು, 205 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 4007 ಸ್ಥಾನಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡು ಪಕ್ಷಕ್ಕೆ ಬಲತುಂಬಿದ್ದಾರೆಂದು ಸಚಿವರು ತಿಳಿಸಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ವಿಷಯಕ್ಕೆ ಬಂದಾಗ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರ ನೆಲೆಯನ್ನು ಹೊಂದಿದ್ದರೂ ಪಕ್ಷದ ಚಿಹ್ನೆ ಇಲ್ಲದೆ, ಕಾರ್ಯಕರ್ತರು ಸ್ಪರ್ಧಿಸುವ ಸ್ಥಳೀಯ ಚುನಾವಣೆ ಬಂದರೆ ಪಕ್ಷಕ್ಕೆ ಗಟ್ಟಿ ನೆಲೆ ಎಂಬುದು ಇರಲಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಕೇಸರಿ ಬಾವುಟ ಹಾರಬೇಕು ಎಂಬ ಕನಸು ರಾಷ್ಟ್ರೀಯ ಹಾಗೂ ರಾಜ್ಯದ ಮಟ್ಟದ ನಾಯಕರದ್ದಾಗಿತ್ತು. ಈಗ ಪ್ರತಿ ಹಳ್ಳಿಗಳಲ್ಲೂ ಕಮಲ ಅರಳಿದೆ ಎಂದವರು ಹೇಳಿದ್ದಾರೆ.

ನಿಮ್ಮ ಉತ್ತಮ ಕೆಲಸ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗೆ ಬುನಾದಿಯಾಗಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಜೊತೆಗೂಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕೈಬಲಪಡಿಸೋಣ ಎಂದಿದ್ದಾರೆ.