”ಹಿಂದೂಗಳು ಖಡ್ಗ ಹಿಡಿದು ದುರ್ಗಮ್ಮನ ದರ್ಶನ ಮಾಡಿ ಬಂದ್ರೆ ಗತಿ ನೆಟ್ಟಗಿರೋಲ್ಲ ಹುಷಾರ್” : ರೆಡ್ಡಿ ಘರ್ಜನೆ

ಬಳ್ಳಾರಿ,ಜ.3- ಪೌರತ್ವ ಕಾಯ್ದೆಯನ್ನು ವಿರೋಧ ಮಾಡಿದರೆ ನಾವು ರೊಚ್ಚಿಗೇಳಬೇಕಾಗುತ್ತದೆ. ಹಿಂದೂಗಳು ಖಡ್ಗ ಹಿಡಿದು ದುರ್ಗಮ್ಮನ ದರ್ಶನ ಮಾಡಿ ಬಂದರೆ ಗತಿ ನೆಟ್ಟಗಿರೋಲ್ಲ ಎಂದು ಬಳ್ಳಾರಿ ಕ್ಷೇತ್ರದ ಶಾಸಕ ಸೋಮಶೇಖರ್ ರೆಡ್ಡಿ ಎಚ್ಚರಿಸಿದ್ದಾರೆ.

ದೇಶಭಕ್ತ ನಾಗರಿಕ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳು ಶಾಂತಿಯಿಂದ ಇದ್ದಾರೆ ಎಂದ ತಕ್ಷಣ ಅವರನ್ನು ಕುರಿಗಳು ಎಂದು ಭಾವಿಸಬೇಡಿ. ಮತ್ತೊಮ್ಮೆ ಬಳ್ಳಾರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದರೆ, ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಪರಿಸ್ಥಿತಿ ನೆಟ್ಟಿರುವುದಿಲ್ಲ ಎಂದು ಕಿಡಿಕಾರಿದರು.

ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿನಿ ಸೂರ್ಯ ಹೇಳಿದಂತೆ ಪಂಚರ್ ಹಾಕುವವರನ್ನು ಮೆಕಾನಿಕ್‍ಗಳನ್ನು ದಾರಿ ತಪ್ಪಿಸಲಾಗುತ್ತಿದೆ. ಕಾಂಗ್ರೆಸಿಗರು ಸುಳ್ಳು ವದಂತಿಗಳನ್ನು ಹರಡಿ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದ್ದಾರೆ. ಮೋದಿಯವರು ಎರಡು ಬಾರಿ ಪ್ರಧಾನಿಯಾದರು ಎಂಬ ಕಾರಣಕ್ಕಾಗಿ ಕಾಂಗ್ರೆಸಿಗರಿಗೆ ಹೊಟ್ಟೆಕಿಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನವರಿಗೆ ಪಾಕಿಸ್ತಾನ, ಬಾಂಗ್ಲಾದ ಹುಳು ಕಡಿಯುತ್ತಿದೆಯಾ? ನಮ್ಮ ದೇಶದಲ್ಲಿ ಇದ್ದುಕೊಂಡು ಏಕೆ ಹುಳ ಕಡಿಸಿಕೊಳ್ಳುತ್ತಿದ್ದೀರಾ ನೀವು ಅಲ್ಲಿಗೇ ಹೋಗಿ ಎಂದ ಸೋಮಶೇಖರ್ ರೆಡ್ಡಿ, ಕಾಂಗ್ರೆಸ್ ಬೇಕೂಫ್‍ಗಳ ಹೇಳಿದ್ದನ್ನು ಕೇಳಿಕೊಂಡು ಬೀದಿಗೆ ಬರುತ್ತೀರಾ? ಈ ದೇಶದಲ್ಲಿ ಇರಬೇಕಂದರೆ ನಾವು ಹೇಳಿದಂತೆ ಕೇಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಹಿಂದೂಗಳ ಸಂಖ್ಯೆ ಶೇ.80ರಷ್ಟಿದೆ. ಸುಳ್ಳುಗಳನ್ನು ನಂಬಿ ಪ್ರತಿಭಟನೆ ಮಾಡಬೇಡಿ. ಹಿಂದೂಗಳ ಎದೆ ಸೀಳಿದರೆ ಪ್ರಧಾನಿ ಮೋದಿ, ಅಮಿತ್ ಷಾ ಕಾಣಿಸುತ್ತಾರೆ. ಸತ್ತು ನಮ್ಮ ಹೆಣ ಸುಡುವಾಗಲು ಭಾರತ್ ಮಾತಾ ಕೀ ಜೈ , ವಂದೇ ಮಾತರಂ ಹೇಳುತ್ತೇವೆ ಎಂದರು.

Sri Raghav

Admin