ಕುಡಿಯಲು ಹಣಕೊಡದ ತಾಯಿಯನ್ನು ಕೊಂದ ಪಾಪಿ ಪುತ್ರ

Social Share

ಬೆಂಗಳೂರು,ಫೆ.26- ಕುಡಿಯಲು ಹಣ ಕೊಡದ ತಾಯಿಯೊಂದಿಗೆ ಜಗಳವಾಡಿದ ಮಗ ಕೋಪದಲ್ಲಿ ಜೋರಾಗಿ ತಳ್ಳಿ ಕೊಲೆ ಮಾಡಿರುವ ಘಟನೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ದೇವರಬೀಚನಹಳ್ಳಿಯ ಓಂಶಕ್ತಿ ದೇವಸ್ಥಾನ ಸಮೀಪದ ಜೋಪಡಿಯಲ್ಲಿ ವಾಸವಾಗಿದ್ದ ಯಮನಮ್ಮ(70) ಕೊಲೆಯಾದವರು.
ಯಮನಮ್ಮನ ಮಗ ಅಂಬರೀಶ್ ಕುಡಿತದ ಚಟ ಹೊಂದಿದ್ದನು. ಪ್ರತಿನಿತ್ಯ ಕುಡಿದು ಮನೆಗೆ ಬಂದು ತಾಯಿಯೊಂದಿಗೆ ವಿನಾಕಾರಣ ಒಂದಲ್ಲಾ ಒಂದು ವಿಚಾರವಾಗಿ ಜಗಳವಾಡುತ್ತಿದ್ದ. ಮಗನ ವರ್ತನೆಯಿಂದ ಯಮನಮ್ಮ ನೊಂದಿದ್ದರು. ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿನಲ್ಲಿ ಅಂಬರೀಶ್ ಕುಡಿಯಲು ಹಣ ಕೇಳಿದಾಗ ಯಮನಮ್ಮ ಹಣ ಕೊಡಲು ನಿರಾಕರಿಸಿದ್ದಾರೆ.
ಅದೇ ಕೋಪದಲ್ಲಿ ಅಮ್ಮನೊಂದಿಗೆ ಜಗಳವಾಡಿ ಜೋರಾಗಿ ತಳ್ಳಿದ್ದಾನೆ. ಆ ಸಂದರ್ಭದಲ್ಲಿ ತಲೆಗೆ ಪೆಟ್ಟಾಗಿ ಯಮನಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಮಾರತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಂಬರೀಶನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article