ಇಡಿಯಿಂದ 3ನೇ ದಿನವೂ ಸೋನಿಯಾ ಗಾಂಧಿ ವಿಚಾರಣೆ

Social Share

ನವದೆಹಲಿ, ಜು.27- ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮೂರನೇ ದಿನದ ವಿಚಾರಣೆಗಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾದರು. ಪುತ್ರಿ ಪ್ರಿಯಾಂಕ ಅವರ ಜೊತೆ ಬೆಳಗ್ಗೆ 11 ಗಂಟೆಗೆ ಸೋನಿಯಾ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು. 75 ವರ್ಷದ ಸೋನಿಯಾ ಗಾಂಧಿ ಅವರನ್ನು ನಿನ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಮಾರು ಎಂಟು ಗಂಟೆ ಕಾಲ ವಿಚಾರಣೆ ನಡೆಸಿದರು.

ಸುಮಾರು 65 ರಿಂದ 70 ಪ್ರಶ್ನೆಗಳನ್ನು ಕೇಳಲಾಗಿತ್ತು. ಇಂದು ಮತ್ತೆ 30 ರಿಂದ 40 ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕಾಗಿ ಆರಂಭಿಸಲಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಡೆಸುತ್ತಿದ್ದ ಅಸೋಷಿಯೆಟ್ ಜನರಲ್ ಸಂಸ್ಥೆಯ ಹಕ್ಕು ಸ್ವಾಮ್ಯತೆಗಳನ್ನು ಕಾಂಗ್ರೆಸ್‍ನ ಅಂಗ ಸಂಸ್ಥೆ ಯಂಗ್ ಇಂಡಿಯಾ ಹಸ್ತಾಂತರದ ವೇಳೆ ಅಕ್ರಮಗಳು ನಡೆದಿವೆ ಎಂಬ ಆರೋಪವಿದ್ದು ಅದರ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಈ ಮೊದಲು ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್‍ಗಾಂಧಿಯನ್ನು ಐದು ದಿನಗಳ ಕಾಲ 50 ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆಸಲಾಗಿತ್ತು. ಸೋನಿಯಾ ಗಾಂಧಿ ಅವರಿಗೆ ನೀಡಿದ್ದ ಸಮನ್ಸ್ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ಜು.21ರಂದು ಮೊದಲ ದಿನ ವಿಚಾರಣೆ ನಡೆಸಲಾಗಿದೆ. ನಿನ್ನೆ ಎರಡನೆ ಬಾರಿ ಮತ್ತು ಇಂದು ಮೂರನೇ ಬಾರಿಗೆ ವಿಚಾರಣೆ ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರ ದ್ವೇಷದ ರಾಜಕಾರಣಕ್ಕೆ ಸೋನಿಯಾ ಗಾಂಧಿ ಅವರ ವಿಚಾರಣೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಹುಲ್ ಗಾಂಧಿ ವಿಚಾರಣೆ ವೇಳೆ ಪ್ರತಿಭಟನೆ ನಡೆಸಲಾಗಿತ್ತು. ಸೋನಿಯಾ ಗಾಂಧಿ ಅವರ ವಿಚಾರಣೆಯ ವೇಳೆಯೂ ನಿನ್ನೆ ದೇಶಾದ್ಯಂತ ಮೌನ ಸತ್ಯಾಗ್ರಹ ನಡೆಸಲಾಗಿದೆ.

ದೆಹಲಿಯಲ್ಲಿ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕುಯ ಯತ್ನ ನಡೆಸಿ ಹಿರಿಯ ನಾಯಕರಾದಿಯಾಗಿ ಕಾಂಗ್ರೆಸಿಗರು ಬಂಧನಕ್ಕೆ ಒಳಗಾಗಿದ್ದರು. ಇಂದು ಮತ್ತೆ ಮೌನಸತ್ಯಾಗ್ರಹವನ್ನು ಮುಂದುವರೆಸಲಾಗಿದೆ. ನಿನ್ನೆ ರಾಜ್ಯ ಕೇಂದ್ರ ಸ್ಥಾನಗಳಲ್ಲಿ ಧರಣಿ ನಡೆದಿತ್ತು. ಇಂದು ಅದು ಮುಂದುವರೆದಿದ್ದು, ಜೊತೆಗೆ ಜಿಲ್ಲಾ ಕೇಂದ್ರಗಳಲ್ಲೂ ಮೌನ ಸತ್ಯಾಗ್ರಹ ನಡೆಸಲಾಗಿದೆ.

Articles You Might Like

Share This Article