ಚಿತ್ರದುರ್ಗ, ಡಿ.16- ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಭಾಗ್ಯ ಬಸವರಾಜನ್ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ದಾವಣಗೆರೆಯಲ್ಲಿ ರಾತ್ರೋರಾತ್ರಿ ಬಂಧಿಸಿದ್ದಾರೆ.
ಮುರುಘಾ ಮಠದ ಮಾಜಿ ಅಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸï.ಕೆ. ಬಸವರಾಜನ್ ಅವರ ಪತ್ನಿ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರೇ ಬಂಧನಕ್ಕೊಳಗಾಗಿದ್ದು, ಇವರನ್ನು ವಶಕ್ಕೆ ಪಡೆದಿರುವ ಪೋಲಿಸರು ಚಿತ್ರದುರ್ಗದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಿಟ್ಟಿದ್ದಾರೆ.
ಕಳೆದ ನ.9 ರಂದು ಗ್ರಾಮಾಂತರ ಠಾಣೆಯಲ್ಲಿ ಪಿತೂರಿ ಪ್ರಕರಣ ದಾಖಲು ಆಗಿದ್ದು, ಅದರಂತೆ ಮುರುಘಾ ಶರಣರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಸುಳ್ಳು ಪ್ರಕರಣ ದಾಖಲು ಮಾಡಲು ಸೌಭಾಗ್ಯ ಬಸವರಾಜನ್ ಪ್ರಚೋದಿಸಿದ್ದರು ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ದೂರು ನೀಡಿದ್ದರು.
ಇದರ ಜೊತೆಗೆ ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜೇಂದ್ರ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಯನ್ನು ನಡೆಸಿದ ವೇಳೆ ಮುರುಘಾ ಶರಣರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಪ್ರಕರಣ ದಾಖಲಾಗಲು ಎಸ್.ಕೆ. ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್ ಅವರ ಪ್ರಚೋಧನೆ ಇದೆ ಎಂದು ಹೇಳಿಕೆ ನೀಡಿದ್ದರು.
ಇದರ ಆಧಾರದ ಮೇಲೆ ನವೆಂಬರ್ 10 ರಂದು ಮಾಜಿ ಆಡಳಿತಾಕಾರಿ ಎಸ್.ಕೆ. ಬಸವರಾಜನ್ ಅವರನ್ನು ಬಂಧಿಸಿದ್ದರು, ಆದರೆ ಸೌಭಾಗ್ಯ ಬಸವರಾಜನ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು. ಇವರನ್ನು ಬೆನ್ನು ಹತ್ತಿದ ಪೊಲೀಸರು ಕಳೆದ ರಾತ್ರಿ ದಾವಣಗೆರೆಯಲ್ಲಿ ಬಂಧಿಸಿದ್ದಾರೆ.ಇಂದು ಬೆಳಗ್ಗೆ ನ್ಯಾಯಾೀಶರ ಮುಂದೆ ಹಾಜರು ಪಡಿಸಿದ ಬಳಿಕಾ ಸೌಭಾಗ್ಯ ಅವರ ವಿಚಾರಣೆಯನ್ನು ಪೋಲಿಸರು ನಡೆಸಲಿದ್ದಾರೆ.
#SoubhagyaBasavarajan, #Arrested, #MurughaSharanaru