ದಕ್ಷಿಣ ವೆಲ್ಲಾರ್ ಯೋಜನೆ ವಿರುದ್ಧ ಸುಪ್ರೀಂನಲ್ಲಿ ದಾವೆ

ಬೆಂಗಳೂರು, ಮಾ.18- ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡು ಸರ್ಕಾರ ದಕ್ಷಿಣ ವೆಲ್ಲಾರ್ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದರ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ದಾವೇ ಹೂಡಲಿದೆ. ಮದುರೈನ ನ್ಯಾಯಾಲಯದಲ್ಲೂ ನಡೆಯುತ್ತಿರುವ ವಿಚಾರಣೆಯಲ್ಲೂ ಮಧ್ಯಪ್ರವೇಶ ಮಾಡಿ ವಿರೋಧ ವ್ಯಕ್ತಪಡಿಸಲಿದೆ. ಕಾನೂನಾತ್ಮಕವಾಗಿ ಈ ಯೋಜನೆ ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂದು ಗೃಹ ಮತ್ತು ಕಾನೂನು ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‍ನ ಸದಸ್ಯ ಎಂ.ನಾರಾಯಣ ಸ್ವಾಮಿ ಅವರ ಪ್ರಶ್ನೆಗೆ ಸಿಎಂ ಪರವಾಗಿ ಮೊದಲು ಉತ್ತರಿಸಿದ ಡಿಸಿಎಂ ಗೋವಿಂದ ಕಾರಜೋಳ ಅವರು, ತಮಿಳುನಾಡಿನ ವಿಧಾನಸಭೆ ಚುನಾವಣೆ ಇದೆ ಎಂಬ ಕಾರಣಕ್ಕಾಗಿ ಗಡಿಬಿಡಿಯಲ್ಲಿ ಯೋಜನೆಗೆ ಅಡಿಗಲ್ಲು ಹಾಕಲಾಗಿದೆ. ಆದರೆ ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದರು. ಈ ಯೋಜನೆಗೆ ಸಂಬಂಧಪಟ್ಟಂತೆ ಸಾಕಷ್ಟು ತಜ್ಞರ ಮತ್ತು ಕಾನೂನು ತಜ್ಞರ ಜೊತೆ ಸಚಿವ ಬಸವರಾಜ್ ಬೊಮ್ಮಾಯಿ ಸಭೆ ನಡಸಿದ್ದಾರೆ. ಪ್ರಶ್ನೆಗೆ ಮುಂದುವರೆದ ಉತ್ತರವನ್ನೇ ಅವರೇ ನೀಡುತ್ತಾರೆ ಎಂದರು.

ದಕ್ಷಿಣ ವೆಲ್ಲಾರ್ ಯೋಜನೆಗೆ ಆರ್ಥಿಕ ನೆರವು ಕೋರಿ ತಮಿಳುನಾಡು ಕೇಂದ್ರಕ್ಕೆ ಬರೆದಿದ್ದ ಪತ್ರ ಜನವರಿ 5ರಂದು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ತಲುಪಿದೆ. ನಾವು ಫೆಬ್ರವರಿ 17ರಂದು ನಮ್ಮ ಆಕ್ಷೇಪಣೆ ಸಲ್ಲಿಸಿದ್ದೇವೆ. ಮಾರ್ಚ್ 1ರಂದು ಪ್ರಧಾನಿಗೆ ಮತ್ತು ಕೇಂದ್ರ ಜಲಸಚಿವರಿಗೂ ಆಕ್ಷೇಪಣೆ ಸಲ್ಲಿಸಿದ್ದು, ಯೋಜನೆ ಮುಂದುವರೆಸದಂತೆ ಕೇಂದ್ರಕ್ಕೆ ತಾಕೀತು ಮಾಡಲು ಹೇಳಿದ್ದೇವೆ. ಈ ಬಗ್ಗೆ ಫೆ.21 ಮತ್ತು 26ರಂದು ನವದೆಹಲಿಯಲ್ಲಿ ಕಾನೂನು ಮತ್ತು ತಾಂತ್ರಿಕ ಪರಿಣಿತರ ಸಭೆ ನಡೆಸಲಾಗಿದೆ. ಯೋಜನೆಯನ್ನು ಮುಂದುವರೆಸದಂತೆ ಸುಪ್ರೀಂಕೋಟ್ ್ಗೆ ಧಾವೆ ಹೂಡುತ್ತೇವೆ ಎಂದರು.

ತಮಿಳುನಾಡಿ ರೈತರೊಬ್ಬರು ಮಧುರೈ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಿಂದ ತೀರ್ಪು ಪಡೆದು ಯೋಜನೆ ಮುಂದುವರೆಸಲು ತಮಿಳುನಾಡು ಸರ್ಕಾರ ಪ್ರಯತ್ನಿಸುತ್ತಿದೆ. ಅದರಲ್ಲಿ ನಮ್ಮನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಆದರೂ ನಾವು ಮಧ್ಯಪ್ರವೇಶಿಸಿ ಆಕ್ಷೇಪಣೆ ದಾಖಲಿಸಲಿದ್ದೇವೆ ಎಂದು ಹೇಳಿದರು.