ದಕ್ಷಿಣ ವಿಭಾಗ ಪೊಲೀಸರ ಭರ್ಜರಿ ಕಾರ್ಯಾಚರಣೆ : ದ್ವಿಚಕ್ರ ವಾಹನ, ಮೊಬೈಲ್‍ಗಳ ವಶ

Social Share

ಬೆಂಗಳೂರು, ಫೆ.11- ದಕ್ಷಿಣ ವಿಭಾಗದ ವಿ.ವಿ.ಪುರಂ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹಿರಿಯ ನಾಗರಿಕರ ಮನೆಗಳಿಗೆ ನುಗ್ಗಿ ಡಕಾಯಿತಿ ಮಾಡುತ್ತಿದ್ದ , ದ್ವಿಚಕ್ರ ವಾಹನ ಹಾಗು ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಿ 23.50 ಲಕ್ಷ ರೂ. ಮೌಲ್ಯದ 22 ದ್ವಿಚಕ್ರ ವಾಹನ, 25 ಮೊಬೈಲ್‍ಗಳು ಹಾಗೂ 107 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
# ವಿ.ವಿ.ಪುರಂ:
ಕಾಲೇಜು ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಬಂಧಿಸಿ 10 ಲಕ್ಷ ರೂ. ಬೆಲೆ ಬಾಳುವ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ದಾಂ ಹುಸೇನ್ (28), ಸಯ್ಯದ್ ರೋಷನ್ ಮತ್ತು ಸಾದಿಕ್ ಪಾಷಾ (20) ಬಂಧಿತ ಆರೋಪಿಗಳು.
ಇವರಿಂದ 10 ಸುಜುಕಿ, 2 ಡಿಯೊ ಮತ್ತು 2 ಪಲ್ಸರ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನವರಿ 31 ರಂದು ಸಂಜೆ 7.15ರ ಸುಮಾರಿನಲ್ಲಿ ಪದ್ಮಾವತಿ ಎಂಬುವವರು ತಮ್ಮ ಪತಿಯೊಂದಿಗೆ ಸುಜುಕಿ ಬೈಕ್‍ನಲ್ಲಿ ಬಂದು ಎನ್‍ಎಚ್‍ಎಸ್ ರಸ್ತೆಯ ಜೈನ್ ಕಾಲೇಜು ಬಳಿ ಬೈಕ್ ನಿಲ್ಲಿಸಿ ಉಪಹಾರ ಸೇವಿಸಲು ಹೋಗಿದ್ದಾಗ ಕಳ್ಳರು ಇವರ ಬೈಕ್ ಎಗರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಸಿದ್ದಾರೆ.
ಈ ಹಿಂದೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸದ್ದಾಂ ಹುಸೇನ್‍ನನ್ನು ಗಸ್ತಿನಲ್ಲಿದ್ದ ಪೊಲೀಸರು ದ್ವಿಚಕ್ರ ವಾಹನ ಸಮೇತ ಹಿಡಿದು ವಿಚಾರಣೆಗೊಳಪಡಿಸಿದಾಗ ಇನ್ನಿತರೆ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ತನ್ನ ಸಹಚರನೊಂದಿಗೆ ಸೇರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ ಮೇರೆಗೆ ವಿವಿಪುರಂ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ, ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಹಾಗೂ ಕಾಟನ್ ಪೇಟೆ, ಪುಲಕೇಶಿ ನಗರ ಹಾಗೂ ನಗರದ ಇತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿರುವುದು ಕಂಡು ಬಂದಿರುತ್ತದೆ.
ಆರೋಪಿ ಸದ್ದಾಂಹುಸೇನ್ ಜೈಲಿಗೆ ಹೋಗಿ ಬಂದಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತ ನೈಟ್ ಪ್ಯಾಂಟ್‍ಗಳನ್ನು ರಸ್ತೆ ಬದಿ ವ್ಯಾಪಾರ ಮಾಡಿಕೊಂಡಿದ್ದು, ದುಶ್ಚಟಗಳಿಗೆ ಹಣ ಸಾಕಾಗದ ಕಾರಣ ಮತ್ತೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡಿ ಬಂದ ಹಣದಲ್ಲಿ ಸಹಚರರೊಂದಿಗೆ ಸೇರಿ ಮೋಜು ಮಸ್ತಿ ಮಾಡುತ್ತಿದ್ದನು.
ಆರೋಪಿ ಸಯ್ಯದ್ ದ್ವಿಚಕ್ರ ವಾಹನಗಳ ಕಳವು ಪ್ರಕರಣದಲ್ಲಿ ಬಂತನಾಗಿ ಜೈಲಿಗೆ ಹೋಗಿ ಹೊರಬಂದ ನಂತರವೂ ತನ್ನ ಚಾಳಿಯನ್ನು ಮುಂದುವರೆಸಿಕೊಂಡು ಊರೂರುಗಳಿಗೆ ಅಲೆಯುತ್ತ ಮದ್ಯವ್ಯಸನಿಯಾಗಿದ್ದನು.
ಮತ್ತೊಬ್ಬ ಆರೋಪಿ ಸಾದಿಕ್, ತಳ್ಳುವ ಗಾಡಿಯಲ್ಲಿ ಮೀನು ವ್ಯಾಪಾರ ವೃತ್ತಿ ಮಾಡಿಕೊಂಡಿದ್ದು ಸಿನಿಮಾ ನೋಡುವುದು, ಸುತ್ತಾಡಲು ಹಣಕ್ಕಾಗಿ ಸದ್ದಾಂನೊಂದಿಗೆ ಸೇರಿಕೊಂಡು ದ್ವಿಚಕ್ರ ವಾಹನ ಕಳವು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
# 25 ಮೊಬೈಲ್ ಫೋನ್‍ಗಳ ವಶ:
ಇದೇ ವ್ಯಾಪ್ತಿಯ ಸುಲಿಗೆ ಪ್ರಕರಣದಲ್ಲಿ ಇಬ್ಬರನ್ನು ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಬೆಲೆಬಾಳುವ 25 ಮೊಬೈಲ್ ಫೋನ್‍ಗಳು ಮತ್ತು ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಹಮ್ಮದ್ ಸಲ್ಮಾನ್ (30), ಅಫೀಜ್ ಷರೀಫ್(38) ಬಂತ ಆರೋಪಿಗಳು.
ಬೈಕ್‍ಗಳಲ್ಲಿ ಸುತ್ತಾಡುತ್ತಾ ಸಾರ್ವಜನಿಕರ ಕೈಗಳಿಂದ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ಈ ಇಬ್ಬರು ಆರೋಪಿಗಳು ಸುಲಿಗೆ ಮಾಡಿದ್ದ ಮೊಬೈಲ್‍ಗಳನ್ನು ಫ್ಲ್ಯಾಶ್ ಮಾಡಿ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿಯಾಗಿ ಓಡಾಡಿಕೊಂಡು ಹಣ ಖರ್ಚು ಮಾಡುತ್ತಿದ್ದರು. ಆರೋಪಿ ಮೊಹಮ್ಮದ್ ಪೇಟಿಂಗ್ ವೃತ್ತಿ ಮಾಡಿಕೊಂಡಿದ್ದು ಸರಿಯಾಗಿ ಕೆಲಸಕ್ಕೆ ಹೋಗದೆ ಸುತ್ತಾಡುವುದು, ಒಳ್ಳೆಯ ಹೊಟೇಲ್‍ಗಳಿಗೆ ಹೋಗಿ ತಿಂಡಿ ತಿನ್ನುವುದು ಇತ್ಯಾದಿ ಹವ್ಯಾಸಗಳನ್ನು ರೂಢಿಸಿಕೊಂಡಿದ್ದನು.
ಮದುವೆಯಾಗಿ ಮೂವರು ಮಕ್ಕಳಿದ್ದು ಮನೆಗೆ ಸರಿಯಾಗಿ ಹೋಗದೆ ಹಲವು ದುಶ್ಚಟಗಳನ್ನು ಬೆಳೆಸಿಕೊಂಂಡು ನಿತ್ಯದ ಖರ್ಚುಗಳಿಗೆ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈತನು ಈ ಹಿಂದೆ ಗಿರಿನಗರ, ಜೆ.ಜೆ.ಆರ್.ನಗರ, ಬೆಳ್ಳಂದೂರು ಮತ್ತು ಆರ್‍ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಗಳಲ್ಲಿ ಕಳವು ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಿಂದ ಹೊರಬಂದ ನಂತರವೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಆರೋಪಿ ಹಫೀಜ್ ಷರೀಫ್‍ಗೆ ಮದುವೆಯಾಗಿ 4 ಮಕ್ಕಳಿದ್ದು ಮೊಬೈಲ್ ರಿಪೇರಿ ಮಾಡುವ ಅಂಗಡಿ ಇಟ್ಟುಕೊಂಡಿದ್ದನು. ಮೊಹಮ್ಮದ್‍ನೊಂದಿಗೆ ಸೇರಿಕೊಂಡು ಸುಲಿಗೆ ಮಾಡಿಕೊಡುತ್ತಿದ್ದ ಮೊಬೈಲ್ ಪೊನ್‍ಗಳನ್ನು ಫ್ಲ್ಯಾಶ್ ಮಾಡಿ ಮಾರಾಟ ಮಾಡುತ್ತಿದ್ದನು.
ಆರೋಪಿಗಳ ಬಂಧನದಿಂದ ಸುಲಿಗೆ ಮಾಡಿದ್ದ 24 ವಿವಿಧ ಮಾಡಲ್‍ಗಳ ಮೊಬೈಲ್ ಫೋನ್‍ಗಳು ಹಾಗೂ ಕಳವು ಮಾಡಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
# ಕುಮಾರಸ್ವಾಮಿ ಲೇಔಟ್:
ಹಿರಿಯ ನಾಗರಿಕರ ಮನೆಗೆ ನುಗ್ಗಿ ಡಕಾಯಿತಿ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 8.50 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳು ಮತ್ತು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತರ್ಬೇಜ್ ಅಹಮದ್( 36), ಸಮೀರ್ ಪಾಷಾ (26), ಸಾಕ್ ಖಾನ್ (30), ಮೊಹಮ್ಮದ್ ಆದ್ನಾನ್ (21) ಬಂಧಿತ ಡಕಾಯಿತರು.
ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಫೀಕ್ ಪಾಷ ಬಂಧನಕ್ಕೆ ತನಿಖೆ ಮುಂದುವರೆದಿದೆ. ಆರೋಪಿಗಳು ಹಿರಿಯ ನಾಗರಿಕರ ಮನೆಗಳನ್ನು ಗುರುತಿಸಿ ತೆರೆದ ಬಾಗಿಲ ಮೂಲಕ ಮನೆ ಒಳಗೆ ನುಗ್ಗಿ ಡಕಾಯಿತಿ ನಡೆಸುತ್ತಿದ್ದರು.
ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಿವಕುಮಾರ್, ಸಬ್‍ಇನ್ಸ್‍ಪೆಕ್ಟರ್ ನಾಗೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಒಟ್ಟು 107 ಗ್ರಾಂ ತೂಕದ ಚಿನ್ನದ ಒಡವೆ ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಒಟ್ಟಾರೆ ಸಿದ್ದಾಪುರ, ತಿಲಕ್‍ನಗರ, ವಿಧಾನಸೌಧ, ಜಿಗಣಿ, ಹೆಬ್ಬಗೋಡಿ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಅವರು ಶ್ಲಾಘಿಸಿದ್ದಾರೆ.

Articles You Might Like

Share This Article