ನೈರುತ್ಯ ಮುಂಗಾರಿನಲ್ಲಿ ಶೇ.11ರಷ್ಟು ಮಳೆ ಕೊರತೆ

ಬೆಂಗಳೂರು,ಜು.6- ರಾಜ್ಯದಲ್ಲಿ ಜೂನ್ 1ರಿಂದ ನಿನ್ನೆಯವರೆಗೆ ನೈರುತ್ಯ ಮುಂಗಾರಿನಲ್ಲಿ ಶೇ.11ರಷ್ಟು ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ವಿಶೇಷ ನಿರ್ದೇಶಕ ವಿ.ಎಸ್. ಪ್ರಕಾಶ್ ತಿಳಿಸಿದ್ದಾರೆ. ಈ ಬಾರಿಯ ಮುಂಗಾರು ಮಳೆ ವಾಡಿಕೆ ಪ್ರಮಾಣದಷ್ಟು ರಾಜ್ಯದಲ್ಲಿ ಆಗಿಲ್ಲ. ವಾಡಿಕೆಗಿಂತ ಶೇ.11ರಷ್ಟು ಮಳೆ ಕೊರತೆಯಾಗಿದೆ. ಇದು ಬರ ಪರಿಸ್ಥಿತಿಯ ಸುಳಿವನ್ನು ಸೂಚಿಸುತ್ತದೆ ಎಂದು ಅವರು ಈ ಸಂಜೆಗೆ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಮಳೆ ಕೊರತೆ ಶೇ.10ಕ್ಕಿಂತ ಹೆಚ್ಚಾಗಿದೆ. ಅಲ್ಲದೆ ಜುಲೈ ಅಂತ್ಯದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ಆದರೆ ರೈತರ ನಿರೀಕ್ಷೆಗೆ ತಕ್ಕಂತಹ ಮಳೆಯಾಗುತ್ತಿಲ್ಲ ಎಂದು ಅವರು ಹೇಳಿದರು.

ಕಳೆದ ಜೂ.29ರಿಂದ ಜುಲೈ 5ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಶೇ.76ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ ಶೇ.72, ಅತಿಹೆಚ್ಚು ಮಳೆಯಾಗುತ್ತಿದ್ದ ಮಲೆನಾಡು ಭಾಗದಲ್ಲಿ ಶೇ.89 ಹಾಗೂ ಕರಾವಳಿ ಭಾಗದಲ್ಲಿ ಶೇ.83ರಷ್ಟು ಮಳೆ ಕೊರತೆ ಉಂಟಾಗಿದೆ.

ಕೃಷ್ಣಾನದಿ ಪಾತ್ರ ಹೊರತುಪಡಿಸಿದರೆ ಉಳಿದ ನದಿಗಳ ಜಲಾಶಯಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ಒಳ ಹರಿವಿಲ್ಲ. ಮುಂಗಾರು ಹಂಗಾಮಿನ ಬಿತ್ತನೆ ಕಾಲವಾಗಿದ್ದು, ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ರೈತರು ಕಂಗಾಲಾಗಿದ್ದಾರೆ. ಹವಲು ಕಡೆ ಭೂಮಿಯಲ್ಲಿ ತೇವಾಂಶ ಕೊರತೆ ಇದ್ದು, ಬಿತ್ತನೆ ಮಾಡಿರುವ ವಿವಿಧ ಬೆಳೆಗಳಿಗೂ ತೊಂದರೆಯಾಗಿದೆ.

ಬಿತ್ತನೆಗೆ ಸಿದ್ದತೆ ಮಾಡಿಕೊಂಡಿರುವ ರೈತರು ಬಿತ್ತನೆ ಮಾಡಬೇಕೊ, ಬೇಡವೊ ಎಂಬ ಗೊಂದಲದಲ್ಲಿದ್ದಾರೆ. ಮಳೆಯ ಅನಿಶ್ಚಿತತೆಯಿಂದಾಗಿ ರೈತರ ಆತಂಕ ಇಮ್ಮಡಿಸಿದೆ ಎಂದು ಅವರು ತಿಳಿಸಿದರು. ಸದ್ಯಕ್ಕೆ ರಾಜ್ಯದ ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದ್ದು, ಇನ್ನು ಎರಡು ದಿನ ಮುಂದುವರೆಯುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗದಿದ್ದರೆ ಬರ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ಅವರು ಹೇಳಿದರು.