“ಏಯ್ ನಿನ್ ಕಥೆ ಎಲ್ಲ ನಂಗೆ ಗೊತ್ತಿದೆ, ಬಾಲ ಬಿಚ್ಚಿದರೆ ಹುಷಾರ್”

Spread the love

ಗೌರಿಬಿದನೂರು, ಸೆ.8- ಹೇ..ಏನೋ ನಿನ್ನ ಜುಟ್ಟು… ಟ್ಯಾಟೋ ಹಾಕ್ಸಿದಿಯಾ.. ಶರ್ಟ್ ಗುಂಡಿ ಹಾಕೋ.. ನಿನ್ನ ಕಥೆಯೆಲ್ಲಾ ನನಗೆ ಗೊತ್ತಿದೆ, ಬಾಲ ಬಿಚ್ಚಿದರೆ ಕಟ್ ಮೋಡೋದೂ ಗೊತ್ತಿದೆ.. ಇದು ಯಾವುದೋ ಸಿನಿಮಾ ಡೈಲಾಗ್ ಅಲ್ಲ.. ಜಿಲ್ಲಾ ಎಸ್‍ಪಿ ಜಿ.ಕೆ.ಮಿಥುನ್ ಕುಮಾರ್ ರೌಡಿಗಳಿಗೆ ಹಾಕಿರುವ ಖಡ್ ಆವಾಜ್…

ರೌಡಿಶೀಟರ್‍ಗಳ ಪರೇಡ್‍ನಲ್ಲಿ ಭಾಗವಹಿಸಿದ್ದ ರೌಡಿಗಳಿಗೆ ಒಂದು ಗಂಟೆ ಕಾಲ ವಿಶೇಷ ಡ್ರಿಲ್ ನಡೆಸಿದ ಸಂದರ್ಭದಲ್ಲಿ ಎಸ್‍ಪಿ ಅವರು ಕೆಲ ರೌಡಿಗಳಿಗೆ ಈ ರೀತಿ ವಾರ್ನಿಂಗ್ ನೀಡಿದರು.

ಲಾಠಿ ಹಿಡಿದು ಒಬ್ಬೊಬ್ಬರನ್ನೂ ಕರೆದು ಗಂಭೀರವಾಗಿ ವಿಚಾರಣೆ ಮಾಡಿ ಎಚ್ಚರಿಕೆ ನೀಡಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆಂಧ್ರ ಗಡಿಭಾಗದಿಂದ ಗಾಂಜಾ ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ.

ಬಾಗೇಪಲ್ಲಿ, ಪಾತಪಾಳ್ಯ, ಚೇಳೂರು, ಚಿಂತಾಮಣಿ ಗಡಿಭಾಗಗಳಲ್ಲಿ ನಾಲ್ಕು ಗಾಂಜಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಜತೆಗೆ ತಾಲೂಕಿನಲ್ಲಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳು, ಹಲ್ಲೆ ,ಕೊಲೆ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಖುದ್ದು ಪರೇಡ್ ಮಾಡುತ್ತಿರುವುದಾಗಿ ತಿಳಿಸಿದರು. ಗಾಂಜಾ ಸಾಗಾಣಿಕೆ ತಡೆಗಟ್ಟಲು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದ್ದು, ಶ್ವಾನದಳದ ನೆರವನ್ನು ಪಡೆಯಲಾಗುತ್ತಿದೆ ಎಂದರು.

ಪರೇಡ್‍ನಲ್ಲಿ ಪಾಲ್ಗೊಂಡ ರೌಡಿಗಳಿಗೆ ಸ್ಥಳ ಬಿಟ್ಟು ಎಲ್ಲಿಗೂ ಹೋಗಬಾರದು. ವಾರಕ್ಕೊಮ್ಮೆ ಠಾಣೆಗೆ ಬಂದು ಹಾಜರಾತಿ ಹಾಕಬೇಕು. ಇಲ್ಲದಿದ್ದಲ್ಲಿ ಪೊಲೀಸರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಮಿಥುನ್‍ಕುಮಾರ್ ತಿಳಿಸಿದ್ದಾರೆ.

ಮಟ್ಕಾ, ಜೂಜಾಟ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಜತೆಗೆ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟುಮಾಡುವುವರನ್ನು ಹೆಡೆಮುರಿಕಟ್ಟಲಾಗುವುದು.

ಈಗಾಗಲೇ ತಾಲೂಕಿನಲ್ಲಿ ಇಬ್ಬರು ರೌಡಿಶೀಟರ್‍ಗಳಿಗೆ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ವೃತ್ತ ನಿರೀಕ್ಷಕ ಎಸ್.ರವಿ, ಎಸ್‍ಐಗಳಾದ ಚಂದ್ರಕಲಾ, ಮೋಹನ್, ಲಕ್ಷ್ಮೀನಾರಾಯಣ್ ಮತ್ತಿತರ ಸಿಬ್ಬಂದಿ ಹಾಜರಿದ್ದರು.