ವಿಶ್ವಕಪ್ ಫುಟ್ಬಾಲ್ : ಪಂದ್ಯ ಡ್ರಾ ಆದರೂ ನಾಕೌಟ್ ಹಂತಕ್ಕೆ ಸ್ಪೇನ್, ಪೋರ್ಚುಗಲ್ ಲಗ್ಗೆ

Spain--01

ಕಲಿನಿನ್‍ಗ್ರಾಡ್/ಸರಾಂಸ್ಕ್, ಜೂ.26-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯ ಲೀಗ್ ಹಂತದಲ್ಲಿ ಮೊರೊಕ್ಕೋ ವಿರುದ್ಧ ಡ್ರಾ ಸಾಧಿಸಿದ ಸ್ಪೇನ್, ಹಾಗೂ ಇರಾನ್ ವಿರುದ್ಧ ಡ್ರಾ ಮಾಡಿಕೊಂಡ ಪೋರ್ಚುಗಲ್ ಟೂರ್ನಿಯ ನಿರ್ಣಾಯಕ ಹಂತ ತಲುಪುವಲ್ಲಿ ಯಶಸ್ವಿಯಾಗಿವೆ.
ನಿನ್ನೆ ತಡರಾತ್ರಿ ನಡೆದ ಬಿ ಗುಂಪಿನ ಅಂತಿಮ ಹಂತದ ಲೀಗ್ ಪಂದ್ಯಗಳಲ್ಲಿ ಅದೃಷ್ಟದ ಡ್ರಾ ಸಾಧಿಸಿದ ಸ್ಪೇನ್ ಮತ್ತು ಪೋರ್ಚುಗಲ್ ಅಂತಿಮ 16ರ ಹಂತ ಪ್ರವೇಶಿಸಿವೆ.

ಕಲಿನಿನ್‍ಗ್ರಾಡ್‍ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ತಂಡ ಪ್ರಬಲ ಮೊರಾಕ್ಕೋ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಿತು. 1-2ರಿಂದ ಹಿಂದಿದ್ದ ಸ್ಪೇನ್ ತಂಡಕ್ಕೆ ಇಗೋ ಅಸ್ಫಾಸ್ ಕೊನೆ ಕ್ಷಣದಲ್ಲಿ ಗೋಲು ತಂದು ಕೊಡುವ ಮೂಲಕ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗುವಂತೆ ಮಾಡಿದರು. ಅದೃಷ್ಟದ ಬೆನ್ನೇರಿ ವಿಶ್ವಕಪ್ ಟೂರ್ನಿಯಲ್ಲಿ ಸವಾರಿ ಮಾಡುತ್ತಿರುವ ಸ್ಪೇನ್ ಮೊರಾಕ್ಕೋ ವಿರುದ್ಧ ಹೆಣಗಾಡಿ 2-2ರಲ್ಲಿ ಡ್ರಾ ಮಾಡಿಕೊಂಡಿದೆ. ಇದರೊಂದಿಗೆ 3 ಪಂದ್ಯಗಳಿಂದ ಒಟ್ಟು ಐದು ಅಂಕಗಳನ್ನು ಗಳಿಸಿ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ನಿರ್ಣಾಯಕ ಪಂದ್ಯದಲ್ಲಿ ಆರಂಭದಿಂದಲೂ ಪ್ರಬಲ ಮೊರಾಕ್ಕೋ, ಸ್ಪೇನ್‍ನನ್ನು ಮಣಿಸುವ ಲಕ್ಷಣಗಳು ಗೋಚರಿಸಿದವು. ಆದರೆ ಬದಲಿ ಆಟಗಾರರಾಗಿ ಕಣಕ್ಕೆ ಇಳಿದ ಅಸ್ಫಾಸ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೊನೆ ಕ್ಷಣದಲ್ಲಿ ಗೋಲು ಗಳಿಸಿ ತಂಡದ ಮಾನ ಕಾಪಾಡಿದರು. 14ನೇ ನಿಮಿಷದಲ್ಲೇ ಖಾಲಿದ್ ಮೊರಾಕ್ಕೋ ಪರ ಗೋಲು ಬಾರಿಸಿ ಭರವಸೆ ಮೂಡಿಸಿದರು. ಆದರೆ ಐದೇ ನಿಮಿಷದಲ್ಲಿ ಸ್ಪೇನ್ ಸಮಬಲ ಸಾಧಿಸಿತು. ಇಸ್ಕೋ ಸ್ಪೇನ್ ಪರ ಮೊದಲ ಖಾತೆ ತೆರೆದರು.

ದ್ವಿತೀಯಾರ್ಧದ 81ನೇ ನಿಮಿಷದಲ್ಲಿ ಯೂಸುಫ್ ಮೊರಾಕ್ಕೋಗೆ ಎರಡನೇ ಗೋಲಿನ ಕೊಡುಗೆ ನೀಡಿದರು. ಇನ್ನೇನು ಗೆಲುವಿನ ದಡ ಮುಟ್ಟಬೇಕೆನ್ನುವಷ್ಟರಲ್ಲಿ 90ನೇ ನಿಮಿಷದಲ್ಲಿ ಅಸ್ಪಾಸ್ ಸ್ಪೇನ್‍ಗೆ ಅಪದ್ಬಾಂಧವರಾದರು. ಅವರ ಗಳಿಸಿದ ಗೋಲು ಪಂದ್ಯಕ್ಕೆ ತಿರುವು ನೀಡಿತು.
ಈ ಅದೃಷ್ಟದ ಡ್ರಾನೊಂದಿಗೆ ಸ್ಪೇನ್ ಪ್ರಿ ಕ್ವಾರ್ಟರ್ ಪ್ರವೇಶಿಸಿದೆ.

ಡ್ರಾ ಆದರೂ ಪೋರ್ಚ್‍ಗಲ್ ಪ್ರಿ ಕ್ವಾರ್ಟರ್‍ಗೆ :
ಸರಾಂಸ್ಕ್‍ನಲ್ಲಿ ನಿನ್ನೆ ತಡರಾತ್ರಿ ನಡೆದ ಲೀಗ್ ಹಂತದ ಮತ್ತೊಂದು ನಿರ್ಣಾಯಕ ಪಂದ್ಯದಲ್ಲಿ ಪೋರ್ಚುಗಲ್ ಮತ್ತು ಇರಾನ್ ವಿರುದ್ಧದ ಪಂದ್ಯವೂ 1-1ರ ಡ್ರಾನಲ್ಲಿ ಅಂತ್ಯಗೊಂಡಿತು. ಡ್ರಾ ಆದರೂ ಅದೃಷ್ಟಶಾಲಿ ತಂಡ ಪೋರ್ಚುಗಲ್ 16ರ ಹಂತ ತಲುಪಿದೆ. ಪೋರ್ಚುಗಲ್ ಪರ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಪೆನಾಲ್ಡಿ ಕಿಲ್ ಅವಕಾಶವನ್ನು ವ್ಯರ್ಥಗೊಳಿಸಿದರ ಪರಿಣಾಮವಾಗಿ ಪೋರ್ಚುಗಲ್ ಇರಾನ್ ವಿರುದ್ಧ 1-1 ಡ್ರಾನಲ್ಲಿ  ಮಾಧಾನಪಟ್ಟುಕೊಳ್ಳಬೇಕಾಯಿತು. ಆದರೂ, ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಪೋರ್ಚುಗಲ್ ನಾಕೌಟ್ ಹಂತ ತಲುಪಿದೆ. ಉತ್ತಮ ಹೋರಾಟ ಪ್ರದರ್ಶಿಸಿದರೂ ಇರಾನ್, ತಂಡದಿಂದ ಹೊರಬಿದ್ದಿದೆ.

ಭಾರಿ ಪೈಪೋಟಿಯಿಂದ ಕೂಡಿದ ಈ ಪಂದ್ಯದಲ್ಲಿ ರಿಕಾರ್ಡೊ ಕ್ವೆರೆಸ್ಟಾ 45ನೇ ನಿಮಿಷದಲ್ಲಿ ಗೋಲು ಬಾರಿಸಿ ಪೋರ್ಚುಗಲ್‍ಗೆ ಮುನ್ನಡೆ ತಂದುಕೊಟ್ಟರು. ಉಭಯ ತಂಡಗಳೂ ಆರಂಭದಿಂದಲೂ ಚೆಂಡಿನ ನಿಯಂತ್ರಣ ಸಾಧಿಸಲು ಹೆಣಗಾಡಿದ್ದು ರೋಚಕತೆ ಸೃಷ್ಟಿಸಿತು. ದ್ವಿತೀಯಾರ್ಧದಲ್ಲಿ ಲಭಿಸಿದ ಪೆನಾಲ್ಟಿ ಕಿಕ್ ಅವಕಾಶವನ್ನು ರೊನಾಲ್ಡೋ ಸದುಪಯೋಗ ಮಾಡಿಕೊಳ್ಳಲಿಲ್ಲ. ಕೊನೆ ಕ್ಷಣದಲ್ಲಿ ಕರೀಂ ಪೆನಾಲ್ಡಿ ಕಿಕ್ ಮೂಲಕ ಗೋಲು ಗಳಿಸಿ ಇರಾನ್ ಡ್ರಾ ಸಾಧಿಸಲು ಕಾರಣರಾದರು. ಪ್ರಿ ಕ್ವಾರ್ಟಲ್‍ನಲ್ಲಿ ಪೋರ್ಚುಗಲ್ ಉರುಗ್ವೆ ತಂಡವನ್ನು ಎದುರಿಸಲಿದೆ. ಬಿ ಗ್ರೂಪ್‍ನಲ್ಲಿ ಇದೀಗ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16ರ ಹಂತಕ್ಕೆ ಮುನ್ನಡೆದಿವೆ.

Sri Raghav

Admin