ಪ್ರತಿಭಟನೆ ಹೊರಗಿಟ್ಟುಕೊಳ್ಳಿ, ಕಾಂಗ್ರೆಸ್ ನಡೆಗೆ ಸ್ಪೀಕರ್ ಗರಂ

Social Share

ಬೆಂಗಳೂರು,ಫೆ.18- ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಲು ಸರ್ವ ಸ್ವತಂತ್ರರು. ಅವರಿಗೆ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ. ನೀವು ಸದನದ ಹೊರಗೆ ಪ್ರತಿಭಟನೆ ನಡೆಸಬಹುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಿಡಿಕಾರಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ಅವರು, ಈ ರೀತಿ ಪದೇ ಪದೇ ಸದನದಲ್ಲಿ ಪ್ರತಿಭಟನೆ ನಡೆಸುವುದು ಪಕ್ಷದ ಹಿರಿಯರಿಗೆ ಶೋಭೆ ತರುವುದಿಲ್ಲ. ನಿಮ್ಮ ಈ ವರ್ತನೆಯಿಂದ ಸದಸ್ಯರ ಹಕ್ಕುಗಳು ಮೊಟಕಾಗುತ್ತವೆ. ಅದನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಕಲಾಪದೊಳಗೆ ಪ್ರತಿಭಟನೆ ಮಾಡುವುದನ್ನು ಬಿಟ್ಟು ಹೊರಗೆ ಇಟ್ಟುಕೊಳ್ಳಿ ಎಂದು ಹೇಳಿದರು.
ಅನೇಕ ಸದಸ್ಯರು ಮಾತನಾಡಬೇಕಿದೆ. ಅವರವರ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳು ಕೇಳಿ ಸಚಿವರು ಮತ್ತು ಮುಖ್ಯಮಂತ್ರಿಗಳಿಂದ ಉತ್ತರ ಪಡೆಯಬೇಕು. ಆದರೆ ಅನುಭವ ಇರುವ ಕಾಂಗ್ರೆಸ್ ಪಕ್ಷದ ಈ ವರ್ತನೆ ನನಗೆ ತುಂಬ ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸಬೇಕು. ಪ್ರಜಾತಂತ್ರದ ನಿಜವಾದ ದೇಗುಲದಂತಿರುವ ಶಾಸನಸಭೆಯಲ್ಲಿ ಈ ರೀತಿ ನಡೆದುಕೊಳ್ಳುವುದು ಯಾರಿಗೂ ಶೋಭೆ ತರುವುದಿಲ್ಲ. ಇಲ್ಲಿ ಉತ್ತಮ ಚರ್ಚೆಯಾಗಬೇಕು. ಅದಕ್ಕೆ ಪರಿಹಾರವೂ ಸಿಗಬೇಕು. ಆದರೆ ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮೊದಲೇ ಜನರಿಗೆ ಅಸಮಾಧಾನವಿದೆ. ನಾವು ಇಲ್ಲಿ ಏನು ಮಾಡುತ್ತಿದ್ದೇವೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಸಂಸದೀಯ ಮೌಲ್ಯಗಳು ಹೆಚ್ಚಾಗಬೇಕೆಂದು ಪ್ರತಿ ಸಂದರ್ಭದಲ್ಲೂ ಹೇಳುತ್ತೇವೆ. ಆದರೆ ಇಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನೆ ನಡೆಸುವುದು ನಿಮ್ಮ ಹಕ್ಕು, ಅದಕ್ಕೆ ನಾನು ಅಡ್ಡಿಪಡಿಸುವುದಿಲ್ಲ. ಆದರೆ ಅವೇಶನಕ್ಕೆ ಅಡ್ಡಿಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೊರಗಡೆ ಹೋಗಿ ಮಾಡಿಕೊಳ್ಳಿ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಕೆ.ಆರ್.ರಮೇಶ್‍ಕುಮಾರ್ ಅವರು ನನ್ನನ್ನು ಸೇರಿಸಿದಂತೆ ಸದನದಲ್ಲಿರುವ ನಮ್ಮ ಪಕ್ಷದವರೆಲ್ಲರನ್ನೂ ಅಮಾನತುಪಡಿಸಿ ಅದಕ್ಕಿರುವ ಅಡ್ಡಿಯಾದರೂ ಏನು ಎಂದು ಪ್ರಶ್ನಿಸಿದರು.
ನೀವು ಈ ರೀತಿ ಹಿರಿಯರಾಗಿ ಹೇಳುವುದು ಸರಿಯಲ್ಲ. ಅಮಾನತುಪಡಿಸಿ ಎಂದು ನಿಮ್ಮ ನಾಯಕರಾದ ಸಿದ್ದರಾಮಯ್ಯನವರಿಂದ ಬರೆಸಿಕೊಡಿ ಆಮೇಲೆ ನಾನು ತೀರ್ಮಾನ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.
ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು, ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಸದಸ್ಯರನ್ನು ಸದನದಿಂದ ಅಮಾನತುಪಡಿಸಿ ನಿಯಮಗಳ ಪ್ರಕಾರ ಸದನ ನಡೆಸಬೇಕು. ನಾವು ಸದನದಲ್ಲಿ ಚರ್ಚೆ ಮಾಡುತ್ತೇವೆ. ಯಾರಿಗೆ ಇಷ್ಟವಿಲ್ಲವೋ ಅವರು ಹೊರಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Articles You Might Like

Share This Article