ಬೆಂಗಳೂರು, ಮಾ.8- ಲಿಂಗ ಸಮಾನತೆ ರೂಪಿಸುವಲ್ಲಿ ನಮ್ಮ-ನಿಮ್ಮೆಲ್ಲರ ಪ್ರಮುಖ ಪಾತ್ರವಿದೆ ಎಂಬುದನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದರು. ಅಪ್ರತಿಮ ಸಾಧನೆಗೈದ ನಾಡಿನ ಎಲ್ಲಾ ಮಹಿಳಾ ಸಾಧಕಿಯರಿಗೆ, ಸದನದ ಎಲ್ಲಾ ಮಹಿಳಾ ಸದಸ್ಯರಿಗೆ ಹಾಗೂ ನಾಡಿನ ಎಲ್ಲಾ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಸದನದ ಮೂಲಕ ಕೋರಿದರು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡ ಕೂಡಲೇ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ ಅವರು, ವಿಶ್ವಸಂಸ್ಥೆಯು 2022ನೇ ಸಾಲಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ ಎಂಬ ಧ್ಯೇಯ ವಾಖ್ಯವನ್ನು ಘೋಷಿಸಿದೆ ಎಂದರು.
ಪ್ರಕೃತಿಯ ವಿಶೇಷ ಸೃಷ್ಟಿ, ಬದ್ಧತೆ, ಏಕಾಗ್ರತೆ ಹಾಗೂ ಧೈರ್ಯದ ಪ್ರತೀಕವೇ ಮಹಿಳೆ. ಸಾಕಷ್ಟು ಕಷ್ಟ, ನಷ್ಟಗಳನ್ನು ಎದುರಿಸಿ ಸಮಾಜದಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತಿರುವ ಭರವಸೆಯ ಬೆಳಕು ಮಹಿಳೆ ಎಂದು ಶ್ಲಾಘಿಸಿದರು.
ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಾಡಿನ ೀಮಂತ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಹಿಳಾ ಸಾಧಕರ ಕೊಡುಗೆಗಳನ್ನು ಸಾರುವ ಮತ್ತು ನೆನಪಿಸುವ ಉದ್ದೇಶದಿಂದ ಪ್ರತಿ ವರ್ಷ ಮಾ.8ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
