ಬೆಂಗಳೂರು,ಫ.4- ಚುನಾವಣೆ ಸುಧಾರಣೆ ಬಗ್ಗೆ ಜಂಟಿ ಅಧಿವೇಶನದಲ್ಲಿ ಎರಡು ದಿನ ಚರ್ಚೆ ಮಾಡುವುದು ಸೂಕ್ತ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಕರ್ನಾಟಕ ವಿಧಾನಮಂಡಲದಿಂದ ಶಾಸಕರಿಗೆ ಹಮ್ಮಿಕೊಂಡಿದ್ದ ಶಾಸಕರಿಗೆ ತರಬೇತಿ ಶಿಬಿರದಲ್ಲಿ ಸಂವಿಧಾನದಡಿಯಲ್ಲಿ ಜನರ ನಿರೀಕ್ಷೆ ಹಾಗೂ ಶಾಸಕರ ಜವಾಬ್ದಾರಿ ಕುರಿತು ಸಭಾಧ್ಯಕ್ಷರು ಉಪನ್ಯಾಸ ನೀಡಿದರು.
ಅಧಿವೇಶನದ 2ನೇ ವಾರ ಚುನಾವಣೆ ಸುಧಾರಣೆ ಬಗ್ಗೆ ಎರಡು ದಿನ ಚರ್ಚೆಯಾಗುವುದು ಸೂಕ್ತ. ಈ ಬಗ್ಗೆ ವಿಧಾನಪರಿಷತ್ನಲ್ಲೂ ಚರ್ಚೆ ಮಾಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿಯಲ್ಲಿ ಮನವಿ ಮಾಡಿದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾ ರಂಗ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಜನಪ್ರತಿನಿಗಳಿಗೆ ಚರ್ಚೆ ಮಾಡುವ ಮನಸ್ಥಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಿವಿಧ ಮಜಲುಗಳ ವಿಶ್ಲೇಷಣಾ ಮನೋಭಾವ ಇರಬೇಕು.
ಮೇಲ್ಮನೆಯಲ್ಲಿ ಹೆಚ್ಚು ಚರ್ಚೆಯಾಗಿ ಕೆಳಮನೆಗೆ ನೀತಿ, ನಿರೂಪಣೆ ಮಾಡಲು ಮಾರ್ಗದರ್ಶಕರಾಗಬೇಕು. ವಿಷ ವರ್ತುಲ ವ್ಯವಸ್ಥೆಯಲ್ಲಿ ರಾಜಕಾರಣಿಗಳಷ್ಟೇ ಅಲ್ಲ ಎಲ್ಲ ರಂಗದವರು ಇದ್ದಾರೆ ಎಂದರು. ಪಕ್ಷದ ವ್ಯವಸ್ಥೆಗಳಲ್ಲೂ ಸುಧಾರಣೆಯಾಗಬೇಕು. ಬಜೆಟ್ ಅಂಗೀಕಾರ ಮಾಡುವುದು, ಕಾಯ್ದೆ ಮಾಡುವುದು, ಆಡಳಿತ ವ್ಯವಸ್ಥೆಗೆ ನೀತಿ ನಿರೂಪಣೆ ತುಂಬುವುದು ಶಾಸಕರ ಜವಾಬ್ದಾರಿ.ವ್ಯವಸೆಗೆ ಹೆಚ್ಚು ಶಕ್ತಿ ತುಂಬಲು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ವಿಧಾನಪರಿಷತ್ನ ಇತ್ತೀಚಿನ ಘಟನೆಗಳು ಗೌರವ ತರುವಂತವುಗಳಾಗಿಲ್ಲ. ಪರಿಷತ್ ಇರಬೇಕೋ, ಬೇಡವೋ ಎಂಬ ಚರ್ಚೆ ಆರಂಭವಾಗಿದೆ. ಆಂತರಿಕ ಶಿಸ್ತು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. ಕಾನೂನಿನಿಂದಲೇ ಬದಲಾವಣೆ ಸಾಧ್ಯವಿಲ್ಲ. ಮನಸ್ಥಿತಿಯೂ ಬದಲಾಗಬೇಕು. ಶಿಕ್ಷಣದಲ್ಲಿ ದೇಶ ಮೊದಲು ಎಂಬ ಸಂಸ್ಕಾರವನ್ನು ನೀಡಬೇಕು ಎಂದರು.
ನಮ್ಮ ಸಂವಿಧಾನ ಭಗದ್ಗೀತೆಯಷ್ಟೇ ಶ್ರೇಷ್ಟವಾದದ್ದು. ಸಂವಿಧಾನದ ಪ್ರಸ್ತಾವನೆ ರತ್ನ ಇದ್ದಂತೆ. ಸಂವಿಧಾನದ ಆಶಯದ ವಿರುದ್ದ ಒಂದಕ್ಷರವೂ ಆಚೆಈಚೆ ಹೋಗಲಾಗದು. ಭಾರತ ಜಗತ್ತಿನ ಶ್ರೇಷ್ಠ ಶಕ್ತಿಯಾಗಿ ಬೆಳೆಯಲು ಸಂವಿಧಾನವೇ ಕಾರಣ ಎಂದು ವ್ಯಾಖ್ಯಾನಿಸಿದರು.
ಹಲವು ದೇಶಗಳ ವಿವಿಧ ಸಂವಿಧಾನಗಳ ಅಧ್ಯಯನ ಮಾಡಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. 1949ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸಿದರೆ 1950 ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. 73 ವರ್ಷವಾದರೂ ನಮಗೆ ಸಂವಿಧಾನ ಬದಲಾಯಿಸಬೇಕೆಂದಿಲ್ಲ. ಕಾಲ ಕಾಲದ ತಿದ್ದುಪಡಿಗೆ ಅವಕಾಶವಿದೆ. ಮುಂದುವರೆದ ದೇಶದಲ್ಲೂ ಸಂವಿಧಾನ ಬದಲಾಗಿದೆ. ಪಾಕಿಸ್ತಾನದಲ್ಲೂ ನಾಲ್ಕು ಬಾರಿ ಸಂವಿಧಾನವನ್ನು ಬದಲು ಮಾಡಲಾಗಿದೆ.
ಅತ್ಯಂತ ಜೀವಂತ ಶ್ರೇಷ್ಠ ಸಂವಿಧಾನ ನಮ್ಮದು. ಹೀಗಾಗಿ ಬಿ.ಆರ್.ಅಂಬೇಡ್ಕರ್ ಅವರಿಗೆ ಎಷ್ಟೇ ಗೌರವ ಸಲ್ಲಿಸಿದರೂ ಕಡಿಮೆಯೇ ಎಂದರು.
ಸಂವಿಧಾನ ಸ್ವಾತಂತ್ರ್ಯ ನೀಡಿದೆ. ಆಗೆಂದ ಮಾತ್ರಕ್ಕೆ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ಇನ್ನೊಂದು ದೇಶದ ಪರ ಘೋಷಣೆ ಕೂಗಬಾರದು ಎಂದು ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿಚಾರವನ್ನು ಉಲ್ಲೇಖಿಸಿದ್ದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
