‘ಇಂದೇ ಎಲ್ಲವೂ ಕೊನೆಯಾಗಲಿದೆ’ : ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.23- ವಿಶ್ವಾಸಮತ ಪ್ರಕ್ರಿಯೆ ಸೇರಿದಂತೆ ಇಂದು ಎಲ್ಲ ಪ್ರಕ್ರಿಯೆಗೆ ತೆರೆ ಎಳೆಯಬೇಕಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಸ್ಪಷ್ಟಪಡಿಸಿದರು.

ದೊಮ್ಮಲೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಿಗದಿಯಂತೆ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಈ ಸಂಬಂಧ ನಿನ್ನೆ ಸದನದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಅತೃಪ್ತ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅವರಿಗೆ ತಿಳುವಳಿಕೆ ಕೊರತೆ ಇದ್ದರೆ ನಾನೇನು ಮಾಡಲು ಆಗುವುದಿಲ್ಲ. ಅವರೇನು ನನಗೆ ದಾಯಾದಿಗಳಲ್ಲ.

ರಾಜೀನಾಮೆ ಹೇಗೆ ನೀಡಬೇಕು ಎಂಬುದು ಗೊತ್ತಿಲ್ಲದಿದ್ದರೆ ನಾನೇನು ಮಾಡಲು ಆಗುತ್ತದೆ. ನೋಟಿಸ್ ಏಕೆ ಕೊಡುತ್ತೇವೆ ಎಂದು ತಿಳಿದುಕೊಳ್ಳದ ಕನಿಷ್ಠ ಜ್ಞಾನ ಇಲ್ಲದವರು ಶಾಸಕರಾಗಿದ್ದಾರೆ ಎಂದು ಸ್ಪೀಕರ್ ಗರಂ ಆದರು.

ಶಾಸಕರು ಬರದಿದ್ದರೆ ನಾನೇನು ಮಾಡಲು ಆಗುವುದಿಲ್ಲ. ನನ್ನ ಪಾಲಿನ ಕೆಲಸವನ್ನು ನಾನು ಮಾಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಈ ನಡುವೆ ಅತೃಪ್ತ ಶಾಸಕರು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ನೋಟಿಸ್ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಅತೃಪ್ತ ಶಾಸಕರು ಪತ್ರ ಬರೆದಿದ್ದು, ವಿಚಾರಣೆಗೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ ಮಾಡಿದ್ದಾರೆ.

ವಿಚಾರಣೆಗೆ ಹಾಜರಾಗುವ ಪ್ರಕ್ರಿಯೆಗೆ ಏಳು ದಿನಗಳ ಕಾಲಾವಕಾಶ ನೀಡಬೇಕು. ನಮಗೆ ಪಕ್ಷದಿಂದ ನೀಡಿರುವ ದೂರು ಹಾಗೂ ಆರೋಪದ ದಾಖಲೆಗಳು ದೊರೆತಿಲ್ಲ.

ನಾವು ಅನಿವಾರ್ಯ ಕಾರಣಗಳಿಂದ ಬೇರೆಡೆ ಇದ್ದು, ವಿಚಾರಣೆಗೆ ಕಾಲಾವಕಾಶ ನೀಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಅತೃಪ್ತ ಶಾಸಕರ ಪರವಾಗಿ ವಿಚಾರಣೆಗೆ ವಕೀಲರು ಸ್ಪೀಕರ್ ಮುಂದೆ ಹಾಜರಾಗಲಿದ್ದಾರೆ.

Sri Raghav

Admin