ನಾಲ್ಕಲ್ಲ 40 ಮಂದಿ ರಾಜೀನಾಮೆ ನೀಡಿದರೂ ಸ್ವೀಕರಿಸುವೆ : ರಮೇಶ್ ಕುಮಾರ್
ಕೋಲಾರ, ಫೆ.7-ರಾಜ್ಯದಲ್ಲಿ ಆಪರೇಷನ್ ಕಮಲದ ಸದ್ದು ಜೋರಾಗಿರುವ ಬೆನ್ನಲ್ಲೇ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ನಾಲ್ಕು ಮಂದಿಯಲ್ಲ 40 ಮಂದಿ ರಾಜೀನಾಮೆ ನೀಡಿದರೂ ಸ್ವೀಕರಿಸಲು ಸಿದ್ಧ ಎಂದು ಘೋಷಿಸಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶಮೂರ್ತಿ ಹಾಗೂ ಪುಷ್ಕರಣಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಮಂಡಲ ಅಧಿವೇಶನಕ್ಕೆ ಗೈರಾಗಿರುವ ಯಾವ ಶಾಸಕರು ನನ್ನನ್ನು ಸಂಪರ್ಕ ಮಾಡಿಲ್ಲ. ಕೆಲವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಒಂದು ವೇಳೆ ಯಾವುದೇ ಶಾಸಕ ರಾಜೀನಾಮೆ ನೀಡಲು ಮುಂದಾದರೂ ಅದನ್ನು ನಾನು ಸ್ವೀಕರಿಸುತ್ತೇನೆ. ನಾಲ್ಕಲ್ಲ 40 ಮಂದಿ ರಾಜೀನಾಮೆ ನೀಡಿದರೂ ಸ್ವೀಕರಿಸಲು ಸಿದ್ಧ ಎಂದು ರಮೇಶ್ಕುಮಾರ್ ಹೇಳಿದರು.
ಅಧಿವೇಶನಕ್ಕೆ ಗೈರಾದ ಶಾಸಕರ ಮೇಲೆ ಕ್ರಮ ಕೈಗೊಳ್ಳಲು ನಾನು ಯಾರು? ಶಾಸಕ ಆನಂದ್ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಗಣೇಶ್ ಬಂಧಿಸುವಂತೆ ಸೂಚನೆ ನೀಡಲು ನಾನೇನು ಪೊಲೀಸ್ ಅಧಿಕಾರಿನಾ ಎಂದು ಅವರು ಪ್ರಶ್ನಿಸಿದರು.