ರಾಜೀನಾಮೆ ಬಗ್ಗೆ ಸ್ಪಷ್ಟೀಕರಣ ನೀಡಲು 3 ಶಾಸಕರಿಗೆ ಸಮಯಾವಕಾಶ ನಿಗದಿ ಮಾಡಿದ ಸ್ಪೀಕರ್
ಬೆಂಗಳೂರು,ಜು.12-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ನ ಮೂರು ಮಂದಿ ಶಾಸಕರಿಗೆ ತಮ್ಮ ರಾಜೀನಾಮೆ ಬಗ್ಗೆ ಸ್ಪಷ್ಟೀಕರಣ ನೀಡಲು ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಸಮಯಾವಕಾಶ ನಿಗದಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಖುದ್ದು ಹಾಜರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಸೂಚಿಸಿದ್ದಾರೆ.ಜೆಡಿಎಸ್ ಶಾಸಕ ನಾರಾಯಣಗೌಡ ಅವರಿಗೆ ಸಂಜೆ 4 ಗಂಟೆಗೆ ಸಭಾಧ್ಯಕ್ಷರ ಕಚೇರಿಗೆ ಹಾಜರಾಗಿ ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಲಾಗಿದೆ.
ಅದೇ ರೀತಿ ಮತ್ತೊಬ್ಬ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಸಂಜೆ 4.30ಕ್ಕೆ ಸಮಯ ನಿಗದಿ ಮಾಡಿದ್ದು, ಆ ಸಮಯದಲ್ಲಿ ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ರಾಜೀನಾಮೆ ನೀಡಿದ್ದ ಈ ಮೂವರು ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ದವಾಗಿರುವ ಹಿನ್ನೆಲೆಯಲ್ಲಿ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಪೀಕರ್ ಅವರು ಶಾಸಕರಿಂದ ಸ್ಪಷ್ಟನೆ ಬಯಸಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಜೆಡಿಎಸ್ ಶಾಸಕ ಗೋಪಾಲಯ್ಯ ಅವರಿಗೆ ಸೋಮವಾರ ಸಮಯ ನಿಗದಿಪಡಿಸಲಾಗಿದೆ.