ಬೆಂಗಳೂರು,ಮಾ.9- ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಸದನದಲ್ಲಿ ಇಲ್ಲದಿರುವ ಬಗ್ಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ರಾಜೇಗೌಡ ಅವರ ಪ್ರಶ್ನೆಗೆ ರೇಷ್ಮೆ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಉತ್ತರಿಸಬೇಕಾಗಿತ್ತು. ಆ ಸಂದರ್ಭದಲ್ಲಿ ಅವರು ಸದನದಲ್ಲಿ ಹಾಜರಿರಲಿಲ್ಲ. ಆಗ ಅಸಮಾಧಾನಗೊಂಡ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪದಲ್ಲಿ ಸಂಬಂಧಿಸಿದ ಸಚಿವರು ಕಡ್ಡಾಯವಾಗಿ ಹಾಜರಿರಬೇಕು. ಬಂದರೂ ಆಯಿತು, ಬಾರದಿದ್ದರೂ ಆಯಿತು ಎಂಬ ಮನಸ್ಥಿತಿ ಸರಿಯಲ್ಲ ಎಂದರು.
ಕಡ್ಡಾಯವಾಗಿ ಹಾಜರಿರಬೇಕಿರುವ ಸಚಿವರಾದ ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಸಿ.ಸಿ.ಪಾಟೀಲ್, ಮುನಿರತ್ನ, ಕೋಟಾ ಶ್ರೀನಿವಾಸಪೂಜಾರಿ ಅವರ ಹೆಸರನ್ನು ಉಲ್ಲೇಖಿಸಿದರು. ಸದನದಲ್ಲಿ ಮುಖ್ಯಮಂತ್ರಿ ಸೇರಿದಂತೆ 8-10 ಸಚಿವರು ಕಡ್ಡಾಯವಾಗಿ ಹಾಜರಿರಬೇಕು ಎಂದು ಹೇಳಿದರು.
ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಎಚ್.ಕೆ.ಪಾಟೀಲ್, ಕಾರ್ಯಕಲಾಪಗಳ ಪಟ್ಟಿ ಸಿದ್ದಪಡಿಸುವಾಗ ಸದನದಲ್ಲಿ ಭಾಗವಹಿಸದಿರುವ ಸದಸ್ಯರ ಪಟ್ಟಿಯನ್ನು ನಮೂದಿಸಿ ಎಂಬ ಸಲಹೆ ಮಾಡಿದರು.
ಆಗ ಸಭಾಧ್ಯಕ್ಷರು, ಸದಸ್ಯರು ಯಾವುದೇ ಸಂದರ್ಭದಲ್ಲಿ ಸದನಕ್ಕೆ ಬಂದು ಹೋಗಿರುತ್ತಾರೆ. ಗೈರು ಹಾಜರಿ ಎಂದು ಪರಿಗಣಿಸಿ ನಮೂದಿಸುವುದು ಕಷ್ಟ ಎಂದರು. ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಚಿವರಾಗಲು ಏನೇನೋ ಮಾಡುತ್ತಾರೆ. ಆದರೆ ಸಚಿವರು ಆದಮೇಲೆ ಬರುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಶಿವಾನಂದ ಕೌಜಲಜಗಿ ಸದನಕ್ಕೆ ಬಾರದ ಸಚಿವರನ್ನು ತೆಗೆದು ಯತ್ನಾಳ್ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಘೋಷಿಸಿದರು. ಅಷ್ಟರಲ್ಲಿ ಸಭಾಧ್ಯಕ್ಷರು ಮಾತನಾಡಿ, ಸಚಿವ ನಾರಾಯಣಗೌಡರು ಸದನಕ್ಕೆ ತಡವಾಗಿ ಬರುವುದಾಗಿ ಹೇಳಿದ್ದಾರೆ ಎಂಬ ಪತ್ರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಚರ್ಚೆ ನಡೆಯುತ್ತಿದ್ದಂತೆ ಸಚಿವರು ಒಬ್ಬಬ್ಬರಾಗಿ ಸದನಕ್ಕೆ ಆಗಮಿಸಲು ತೊಡಗಿದರು.
