ಬೆಂಗಳೂರು,ಸೆ.17- ಬಿಡಿಎ ವಸತಿ ಯೋಜನೆಯ ಗುತ್ತಿಗೆ ನೀಡುವ ಸಲುವಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಸಂಬಂಧ ವಿಶೇಷ ನ್ಯಾಯಾಲಯದ ಆದೇಶದ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯರಪ್ಪ ಅವರ ಮೇಲೆ ಎಫ್‍ಐಆರ್ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ರಾಮಲಿಂಗಂ ಕನ್ಸ್‍ಟ್ರಕ್ಷನ್ ಕಂಪೆನಿಗೆ ಬಿಡಿಎಯಿಂದ ವಸತಿ ಯೋಜನೆಗೆ ಸಂಬಂಸಿದಂತೆ ಅನುಮತಿ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿಶೇಷ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು.
ಇದರ ಅನ್ವಯ ವಿಚಾರಣೆ ನಡೆಸಿದ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಇಂದು ಲೋಕಾಯುಕ್ತ ಪೊಲೀಸರು ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್, ಚಂದ್ರಕಾಂತ್, ರಾಮಲಿಂಗಂ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ಅವರ ಮೇಲೆ ಪಿಸಿ ಆ್ಯಕ್ಟ್7,8,9,10,13ಮತ್ತು ಐಪಿಸಿ ಸೆಕ್ಷನ್ 383,384,415,420, ಸೆಕ್ಷನ್ 34 ಹಾಗೂ 120ಬಿ ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ದೊಡ್ಡವರ ಮನೆ ಬಳಿ ಜೆಸಿಬಿಗಳು ಸೈಲೆಂಟ್, ನಾಲ್ಕೇ ದಿನಕ್ಕೆ ಸೀಮಿತವಾಯ್ತು ಬಿಬಿಎಂಪಿ ಪೌರುಷ ಪ್ರದರ್ಶನ
ಸದ್ಯದಲ್ಲಿಯೇ ತನಿಖೆ ಆರಂಭವಾಗಲಿದ್ದು, ಮತ್ತೆ ಬಿಎಸ್‍ವೈಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿಚಾರಣೆಗಾಗಿ ನೋಟಿಸ್ ಜಾರಿಗೆ ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಈಗ ಆರೋಪಿತರ ಪರ ವಕೀಲರು ಕಾನೂನು ಸಮರಕ್ಕೆ ಸಜ್ಜಾಗುತ್ತಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಲೋಕಾಯುಕ್ತ ಚುರುಕಾಗಿದ್ದು, ಇನ್ನೂ ಯಾವ ಯಾವ ಪ್ರಕರಣಗಳು ಜೀವ ಪಡೆಯುತ್ತವೆ ಎಂಬ ಬಗ್ಗೆ ಕುತೂಹಲ ಕೆರಳಿಸಿದೆ.
ಪ್ರಕರಣದ ಹಿನ್ನೆಲೆ: ಬಿಎಸ್‍ವೈ ಸಿಎಂ ಆಗಿದ್ದ ವೇಳೆ ಬಿಡಿಎ ಕಾಂಟ್ರಾಕ್ಟ್ ನೀಡುವ ಸಂಬಂಧ ಭ್ರಷ್ಟಾಚಾರ ನಡೆದಿದೆ ಎಂದು ಆಗಲೇ ದೂರು ನೀಡಲಾಗಿತ್ತು. ಆದರೆ, ರಾಜ್ಯಪಾಲರ ಪೂರ್ವಾನುಮತಿ ನೀಡಿದ ಕಾರಣ ಜನಪ್ರತಿನಿಗಳ ವಿಶೇಷ ನ್ಯಾಯಾಲಯ ದೂರನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಟಿ.ಜೆ.ಅಬ್ರಾಹಂ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನಂತರ ವಿಚಾರಣೆ ನಡೆಸಿದ ಹೈಕೋರ್ಟ್ ಅಬ್ರಾಹಂ ಪರ ತೀರ್ಪು ನೀಡಿ ಜನಪ್ರತಿನಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.