ಬೆಂಗಳೂರು, ಜು.11- ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಕೈಗೊಳ್ಳುವ ಬಹುಜನರ ಆಸೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಬೆಂಗಳೂರಿನಿಂದ ಕಾಶಿಗೆ ನೇರ ರೈಲು ಸೇವೆ ಆರಂಭಿಸುತ್ತಿದೆ. ಬಯ್ಯಪ್ಪನಹಳ್ಳಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಾರಣಾಸಿಗೆ ಭಾರತ್ ಗೌರವ್ ವಿಶೇಷ ರೈಲು ಯಾತ್ರೆ ಸೇವೆಯ ಕುರಿತು ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಇದರ ಬಗ್ಗೆ ಮಾಹಿತಿ ನೀಡಿದರು.
ಬರುವ ಶ್ರಾವಣ ಮಾಸದ ಅಂತ್ಯದವೇಳೆಗೆ ಕಾಶಿಗೆ ವಿಶೇಷ ರೈಲು ಚಾಲನೆಗೊಳ್ಳಲಿದೆ ಎಂದು ಘೋಷಿಸಿದ ಅವರು, ಇದಕ್ಕಾಗಿ ಸುಮಾರು 15 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕಾಶಿಯಾತ್ರೆ ಕೈಗೊಳ್ಳುವವರಿಗೆ ವೈಯಕ್ತಿಕವಾಗಿ ಸಹಾಯಧನವನ್ನು ನೀಡುವ ಯೋಜನೆ ಆರಂಭಗೊಂಡಿದೆ. ಇದೊಂದು ಐತಿಹಾಸಿಕ ಸೇವೆಯಾಗಿರುವುದರಿಂದ ರೈಲಿನ ಬೋಗಿಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುವುದು ಸೇರಿದಂತೆ ರಿಯಾಯಿತಿ ದರದಲ್ಲಿ ವಾರದ ಎಲ್ಲ ದಿನಗಳೂ ಈ ರೈಲು ಲಭ್ಯವಾಗುವಂತೆ ನೋಡಿಕೊಳ್ಳಲು ಈಗಾಗಲೇ ರೈಲ್ವೆ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಈ ಕುರಿತು ರೈಲ್ವೆ ಇಲಾಖೆಗೆ ಈಗಾಗಲೇ ಒಂದು ಕೋಟಿ ರೂ. ಹಣ ನೀಡಿ ನೋಂದಣಿ ಮಾಡಲಾಗಿದೆ. ಇದಲ್ಲದೆ, ಒಂದು ಕೋಟಿ ರೂ. ಭೌತಿಕ ಬ್ಯಾಂಕ್ ಗ್ಯಾರಂಟಿಯನ್ನು ಕೂಡ ನೀಡಲಾಗಿದ್ದು, ಮುಂದಿನ 15 ರಿಂದ 20 ವರ್ಷಗಳವರೆಗೂ ಈ ರೈಲನ್ನು ನಾವು ಬಾಡಿಗೆಗೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನಮ್ಮ ರಾಜ್ಯ ಹಾಗೂ ಬೆಂಗಳೂರಿನಲ್ಲಿರುವ ಯಾತ್ರಾರ್ಥಿಗಳಿಗೆ ಕೇವಲ ಕಾಶಿಯಲ್ಲದೆ ವಾರಣಾಸಿ, ಅಯೋಧ್ಯೆ, ಪ್ರಯಾಗ್‍ರಾಜ್ ದರ್ಶನಕ್ಕೂ ಇದರಿಂದ ಅವಕಾಶ ಸಿಗಲಿದೆ ಎಂದು ಹೇಳಿದರು. ಈಗಾಗಲೇ ಮಾರ್ಗಸೂಚಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.
ಭಾರತ ಸರ್ಕಾರದ ಮಹತ್ವದ ಯೋಜನೆಯಾದ ಈ ಭಾರತ್ ಗೌರವ್ ಯಾತ್ರೆಯಿಂದ ಕೇವಲ ಯಾತ್ರಿಗಳಲ್ಲದೆ ಪ್ರವಾಸೋದ್ಯಮದ ಆಕರ್ಷಣೆಗೂ ಕೂಡ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈಲಿನ ವಿಶೇಷತೆಗಳು:
* ಒಟ್ಟು 14 ಬೋಗಿಗಳು, 3 ಎಸಿ ಟಯರ್ ಕೋಚ್.
* ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ.
* ಬೋಗಿಗಳ ಮೇಲೆ ನಮ್ಮ ರಾಜ್ಯದ ದೇವಸ್ಥಾನಗಳ ಬಗ್ಗೆ ಮಾಹಿತಿ.
* ಒಬ್ಬರಿಗೆ 8533ರೂ. ಟಿಕೆಟ್ ದರ.
* ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಹಾಗೂ ಮೂಲ ಸೌಕರ್ಯಕ್ಕೆ ರೈಲ್ವೆ ಇಲಾಖೆಯ ಐಆರ್‍ಸಿಟಿಸಿ ಜತೆಗೆ ಅಗತ್ಯ ಒಪ್ಪಂದ.
* ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಸಹಾಯಧನ.
* ಪ್ರವಾಸದ ಅವಧಿ ಏಳು ದಿನ.