ದೇಶದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳ ಸಂಖ್ಯೆ 13 ಪಟ್ಟು ಹೆಚ್ಚಳ..!

Spread the love

ನವದೆಹಲಿ, ಮೇ 29- ಕೋವಿಡ್ ಸಾಮಾಜಿಕ ಪ್ರಭಾವದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಸ್ವಯಂ ಸೇವಾ ಸಂಸ್ಥೆಗಳು ಕಳವಳ ವ್ಯಕ್ತ ಪಡಿಸಿವೆ.  ಪರಿಸ್ಥಿತಿಯ ಗಂಭೀರತೆ ಅರಿತು ಸರ್ಕಾರ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸಬೇಕು, ಪೋಷಕರಿಗೆ ತರಬೇತಿ ನೀಡಿ, ಜಾಗೃತಗೊಳಿಸಬೇಕು ಎಂದು ಎನ್‍ಜಿಒಗಳು ಸಲಹೆ ನೀಡಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‍ಸಿಆರ್‍ಬಿ) ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಭಾರತದಲ್ಲಿ 59,262 ಮಕ್ಕಳು ಕಾಣೆಯಾಗಿದ್ದಾರೆ. ಹಿಂದಿನ ವರ್ಷ ಕಾಣೆಯಾದ 48,972 ಮಕ್ಕಳು ಪತ್ತೆಯಾಗದೆ ಉಳಿದಿದ್ದಾರೆ. ಈ ಮೂಲಕ ಒಟ್ಟು 1,08,234 ಮಕ್ಕಳು ನಾಪತ್ತೆಯಾಗಿದ್ದಾರೆ.
2008 ರಲ್ಲಿ 7,650 ಮಕ್ಕಳು ಕಾಣೆಯಾದ ಪ್ರಕರಣಗಳು ವರದಿಯಾಗಿದ್ದವು. 2008 ಮತ್ತು 2020 ರ ಅಂದಾಜಿನಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ 13 ಪಟ್ಟು ಏರಿಕೆಯಾಗಿದೆ.

ಕೈಲಾಶ್ ಸತ್ಯಾರ್ಥಿ ಫೌಂಡೇಶನ್‍ನ ಸಹೋದರ ಸಂಸ್ಥೆ ಬಚ್ಪನ್ ಬಚಾವೋ ಆಂದೋಲನ (ಬಿಬಿಎ) ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 12 ಸಾವಿರ ಮಕ್ಕಳನ್ನು ರಕ್ಷಿಸಿದೆ ಎಂದು ಬಿಬಿಎ ಕಾರ್ಯನಿರ್ವಾಹಕ ನಿರ್ದೇಶಕ ಧನಂಜಯ್ ತಿಂಗಳಲ್ ಹೇಳಿದ್ದಾರೆ.
ಕೋವಿಡ್ ನಂತರ ಮಕ್ಕಳ ಕಳ್ಳಸಾಗಣೆ ಹಲವಾರು ಪಟ್ಟು ಹೆಚ್ಚಾಗಿದೆ. 2021 ರಲ್ಲಿ ಮಧ್ಯಪ್ರದೇಶದಲ್ಲಿ ಸರಾಸರಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಪ್ರತಿದಿನ ಕಾಣೆಯಾಗಿದ್ದಾರೆ ಎಂದು ಎನ್‍ಜಿಒ ಮಾಹಿತಿ ಬಿಡುಗಡೆ ಮಾಡಿದೆ.

ಕೆಲವು ಮಕ್ಕಳನ್ನು ಅವರ ಪೋಷಕರ ಒಪ್ಪಿಗೆಯೊಂದಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ, ಇನ್ನೂ ಕೆಲವು ಮಕ್ಕಳು ಸ್ವಯಂ ಪ್ರೇರಣೆಯೊಂದಿಗೆ ಕಳ್ಳ ಸಾಗಾಣಿಕೆದಾರರೊಂದಿಗೆ ಹೋಗಿದ್ದಾರೆ. ಅಂತಿಮವಾಗಿ ಈ ಮಕ್ಕಳಲ್ಲಿ ಹೆಚ್ಚಿನವರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಭಿಕ್ಷೆ ಬೇಡುವ ಯಾವುದೇ ಮಗು ಕಂಡರೆ ಅಥವಾ ಪೋಷಕರು ಜೊತೆಗಿಲ್ಲದ ಮಗು ಉಳಿದಿದ್ದರೆ ತಕ್ಷಣವೇ ಮಧ್ಯಪ್ರವೇಶಿಸುವಂತೆ ಎನ್‍ಜಿಒಗಳು ರಕ್ಷಣಾ ಸಿಬ್ಬಂದಿಗಳನ್ನು ಒತ್ತಾಯಿಸಿವೆ. ಮಕ್ಕಳ ರಕ್ಷಣಾ ವಿಭಾಗದ ಉಪನಿರ್ದೇಶಕ ಪ್ರಭಾತ್ ಕುಮಾರ್ ಮಾತನಾಡಿ, ಹೆಚ್ಚಿದ ಬಡತನ ಮಕ್ಕಳು ಕಾಣೆಯಾಗಲು ಅಥವಾ ಕಳ್ಳಸಾಗಾಣಿಕೆಗೆ ಬಲಿಯಾಗಲು ಪ್ರಮುಖ ಕಾರಣವಾಗಿದೆ. ಕೋವಿಡ್ ವೇಳೆ ಜಾರಿಗೊಳಿಸಿದ ಲಾಕ್‍ಡೌನ್ ಮತ್ತು ನಿರ್ಬಂಧಗಳಿಂದಾಗಿ ಶಾಲಾ ಶಿಕ್ಷಣ, ಕಲಿಕೆ ಚಟುವಟಿಕೆಗಳಲ್ಲಿ ಕೊರತೆಯಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಹೇಳಿದರು.

ಪ್ರಾದೇಶಿಕ ನಿರ್ದೇಶಕ (ಉತ್ತರ) ಸೋಹಾ ಮೊಯಿತ್ರಾ ಮಾತನಾಡಿ, ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಈಗಾಗಲೇ ಸಾಲದಲ್ಲಿವೆ. ಸಾಂಕ್ರಾಮಿಕ ರೋಗದಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಸಾಲ ಮರುಪಾವತಿಯ ಒತ್ತಡವು ಅಂತಹ ಕುಟುಂಬಗಳ ಮಕ್ಕಳ ಕಳ್ಳಸಾಗಣೆಗೆ, ಕೂಲಿ ಮತ್ತು ಮದುವೆಗೆ ಕುಮ್ಮಕ್ಕು ನೀಡಿದೆ. ಮುಖವಾಡಗಳನ್ನು ಕಡ್ಡಾಯವಾಗಿ ಬಳಸುವುದರಿಂದ ಕಳ್ಳಸಾಗಣೆದಾರರು ಮತ್ತು ಅಪಹರಣಕಾರರನ್ನು ಗುರುತಿಸುವುದು ಕಷ್ಟಕರವಾಗುತ್ತದೆ ಎಂದು ಹೇಳಿದರು.

2020 ರಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ಸಂಪೂರ್ಣ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಲ್ಲಿ ಮಾರ್ಚ್‍ನಿಂದ ಜೂನ್‍ವರೆಗೆ- 59,262 ಮಕ್ಕಳು (13,566 ಹುಡುಗರು, 45,687 ಹುಡುಗಿಯರು, ಒಂಬತ್ತು ತೃತೀಯಲಿಂಗ ಮಕ್ಕಳು) ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

2018 ರಲ್ಲಿ ಶೇ.70 ರಿಂದ 2019 ರಲ್ಲಿ ಶೇ.71 ಕ್ಕೆ ಮತ್ತು 2020 ರಲ್ಲಿ ಶೇ.77 ರಷ್ಟು ಮಕ್ಕಳ ಕಾಣೆಯ್ಗಾಗಿದ್ದರೆ, 2018 ರಲ್ಲಿ ಶೇ.42, 2019 ರಲ್ಲಿ ಶೇ.39, 2020 ರಲ್ಲಿ ಶೇ.45 ರಷ್ಟು ಮಕ್ಕಳು ಪತ್ತೆಯಾಗಿದ್ದಾರೆ ಎಂದು ಎನ್‍ಸಿಆರ್‍ಬಿ ಮಾಹಿತಿ ತಿಳಿಸಿದೆ.

Facebook Comments