ನವದೆಹಲಿ, ಫೆ.24- ರಷ್ಯಾ ಮತ್ತು ಉಕ್ರೇನ್ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ತಕ್ಷಣವೇ ಶಮನಗೊಳಿಸಬೇಕೆಂದು ಭಾರತ ಕರೆ ನೀಡಿದೆ. ಹದಿನೈದು ರಾಷ್ಟ್ರಗಳ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ಟಿ.ಎಸ್.ತಿರುಮೂರ್ತಿ ಅವರು ಎರಡು ದಿನಗಳಿಂದ ಭಾರತವು ಈ ಉದ್ವಿಗ್ನತೆ ಶಮನಕ್ಕೆ ಧ್ವನಿ ಎತ್ತುತ್ತಲೇ ಇದೆ ಮತ್ತು ರಾಜತಾಂತ್ರಿಕವಾಗಿ ಒತ್ತು ನೀಡುತ್ತಲೇ ಇದೆ.
ಆದರೆ, ಅಂತಾರಾಷ್ಟ್ರೀಯ ಸಮುದಾಯ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸಬೇಕೆಂದು ನಾವು ನೀಡಿದ ಕರೆಯನ್ನು ಯಾರೂ ಕಿವಿಗೆ ಹಾಕಿಕೊಂಡಂತಿಲ್ಲ ಎಂದು ವಿಷಾದಿಸಿದ್ದಾರೆ.
ಏತನ್ಮಧ್ಯೆ ಇತ್ತೀಚಿನ ಮಾಹಿತಿ ಪ್ರಕಾರ, ಏರ್ ಇಂಡಿಯಾ ವಿಮಾನ ಎಐ-1947 ಉಕ್ರೇನ್‍ನ ಕೀವ್‍ನಲ್ಲಿ NATAM (ನೋಟೀಸ್ ಟು ಏರ್‍ಮಿಷನ್)ನಿಂದಾಗಿ ದೆಹಲಿಗೆ ವಾಪಸಾಗುತ್ತಿದೆ. ಉಕ್ರೇನ್ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಿಮಾನ 182 ಭಾರತೀಯರನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ 7.45ರ ವೇಳೆಗೆ ತಲುಪಿತು.
ಗಣನೀಯವಾಗಿ ಹಲವಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದು, ತಮ್ಮನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ ಕೀವ್‍ನಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸಿರುವುದರಿಂದ ಭಾರತೀಯ ಸರ್ಕಾರ ಈ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಾಗಿದೆ.
ಉಕ್ರೇನ್‍ನ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ 20 ಸಾವಿರಕ್ಕೂ ಅಧಿಕ ಭಾರತೀಯರು ನೆಲೆಸಿದ್ದಾರೆ ಎಂದು ತಿರುಮೂರ್ತಿ ಖಚಿತಪಡಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯರನ್ನು ಅಗತ್ಯವಿರುವಂತೆ ಭಾರತಕ್ಕೆ ವಾಪಸಾಗಲು ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ಅವರು ನುಡಿದರು.
