Monday, April 13, 2026
Homeಕ್ರೀಡಾ ಸುದ್ದಿಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ Vs ಸಿಎಸ್‌‍ಕೆ ಹೈವೋಲ್ಟೇಜ್ ಪಂದ್ಯ : ಭಾರಿ ಭದ್ರತೆ, ಮಫ್ತಿ ಪೊಲೀಸರ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ Vs ಸಿಎಸ್‌‍ಕೆ ಹೈವೋಲ್ಟೇಜ್ ಪಂದ್ಯ : ಭಾರಿ ಭದ್ರತೆ, ಮಫ್ತಿ ಪೊಲೀಸರ ನಿಯೋಜನೆ

RCB Vs CSK high-voltage match at Chinnaswamy Stadium

ಬೆಂಗಳೂರು, ಏ. 5- ಆರ್‌ಸಿಬಿ ತಂಡದ ಜರ್ಸಿ ಹಾಕಿಕೊಂಡು ರಾಯಲ್‌ ಚಾಲೆಂಜರ್ಸ್‌ನ ಅಭಿಮಾನಿಗಳಂತೆ ಪೋಸು ನೀಡುತ್ತಾ ಕ್ರಿಕೆಟ್‌ ಅಂಗಳದಲ್ಲಿ ಮೊಬೈಲ್‌ ದೋಚುವುದನ್ನೇ ಕಸುಬು ಮಾಡಿಕೊಂಡಿದ್ದ ಜಾರ್ಖಂಡ್‌ ಮೂಲದ ಕಳ್ಳರ ಕೈ ಚಳಕಕ್ಕೆ ಬ್ರೇಕ್‌ ಹಾಕುವ ಉದ್ದೇಶದಿಂದ ಇಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತಷ್ಟು ಪೊಲೀಸ್‌‍ ಭದ್ರತೆ ಕಲ್ಪಿಸಲಾಗಿದೆ.

ಇಂದು ಸಂಜೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌‍ಕೆ ತಂಡಗಳ ನಡುವಿನ ಪಂದ್ಯಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿರುವ ಹಿನ್ನೆಲ್ಲೆಯಲ್ಲಿ ಮೈದಾನದ ಸುತ್ತಮುತ್ತ 2300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅದರಲ್ಲೂ ಅಭಿಮಾನಿಗಳು ಕ್ರೀಡಾಂಗಣ ಪ್ರವೇಶಿಸುವ ಪ್ರತಿ ಗೇಟ್‌ಗಳ ಸಮೀಪ 10 ಮಂದಿ ಪೊಲೀಸರನ್ನು ಮಫ್ತಿಯಲ್ಲಿ ನಿಯೋಜನೆ ಮಾಡಲಾಗಿದೆ.

ಕಾರಣವೇನು? ಕಳೆದ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರ 70 ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಕಳುವು ಮಾಡಲಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಜಾರ್ಖಂಡ್‌ ಮೂಲದ ಕಳ್ಳರ ಗುಂಪೊಂದು ಆರ್‌ಸಿಬಿ ತಂಡದ ಜೆರ್ಸಿ ಧರಿಸಿ ಆ ತಂಡದ ಅಭಿಮಾನಿಗಳಂತೆ ಪೋಸು ನೀಡುತ್ತಾ ಪ್ರೇಕ್ಷಕರ ಮೊಬೈಲ್‌ ಕಳ್ಳತನ ಮಾಡುತ್ತಿರುವುದು ಪತ್ತೆಯಾಗಿತ್ತು.

ತಕ್ಷಣ ಕಾರ್ಯಚರಣೆಗಿಳಿದ ಪೊಲೀಸರು ಮೋಬೈಲ್‌ ಕಳ್ಳತನ ಮಾಡುತ್ತಿದ್ದ ಜಾರ್ಖಂಡ್‌ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತಮ ಕೈ ಚಳಕ ತೋರಿಸಿ ಪ್ರೇಕ್ಷಕರ ಮೊಬೈಲ್‌ ಎಗರಿಸುತ್ತಿದ್ದ ಕಳ್ಳರ ತಂಡದಲ್ಲಿ 9 ಮಂದಿ ಅಪ್ರಾಪ್ತರು ಇರುವುದು ಗೊತ್ತಾಗಿತ್ತು.

ಹೀಗಾಗಿ ಇಂದಿನ ಪಂದ್ಯಕ್ಕೆ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಈ ಬಾರಿ ಕ್ರೀಡಾಂಗಣದ ಸಮೀಪ ಎರಡು ಹೆಚ್ಚುವರಿ ಬ್ಯಾಗೇಜ್‌ ಕೌಂಟರ್‌ಗಳನ್ನು ತೆರೆಯಲಾಗಿದೆ. ಜೊತೆಗೆ ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರು ತಮ ಮೊಬೈಲ್‌ ಫೋನ್‌ಗಳ ಬಗ್ಗೆ ಎಚ್ಚರವಹಿಸುಂತೆ ವಿಶೇಷ ಸೂಚನೆಗಳನ್ನು ನೀಡಲಾಗುತ್ತಿದೆ.

ಸ್ಟೇಡಿಯಂ ಸುತ್ತಮತ್ತು ಹೆಚ್ಚು ಸೈನ್‌ ಬೋರ್ಡ್‌ಗಳನ್ನು ಅಳವಡಿಸಿರುವುದರ ಜೊತೆಗೆ ಮೈಕ್‌ ಮೂಲಕ ಪ್ರೇಕ್ಷಕರನ್ನು ಎಚ್ಚರಿಸಲಾಗುವುದು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರ ಅನುಕೂಲಕ್ಕಾಗಿ ವಿಶೇಷ ಬಸ್‌‍ಗಳ ವ್ಯವಸ್ಥೆ ಮಾಡಲಾಗಿದೆ ಹಾಗೂ ಮೆಟ್ರೋ ಸಂಚಾರವನ್ನು ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಕ್ರಿಕೆಟ್‌ ಅಭಿಮಾನಿಗಳು ಕಾರಿನಲ್ಲಿ ಬರುವ ಬದಲು ಸಾರ್ವಜನಿಕ ಸೇವೆ ಬಳಸಬೇಕು ಹಾಗೂ ನಕಲಿ ಟಿಕೆಟ್‌ ಮಾರಾಟದ ಬಗ್ಗೆಯೂ ಎಚ್ಚರ ವಹಿಸುವುದು ಸೂಕ್ತ. ಟಿಕೆಟ್‌ ಸಿಗದಿದ್ದವರು ಯಾವುದೇ ಕಾರಣಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಗೆ ಬರಬಾರದು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಯಾಕಿಷ್ಟು ಭದ್ರತೆ; ಕಳೆದ ಬಾರಿ ಆರ್‌ಸಿಬಿ ತಂಡ ಐಪಿಎಲ್‌ ಪ್ರಶಸ್ತಿ ಗೆದ್ದ ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಕ್ರೀಡಾಭಿಮಾನಿಗಳು ಬಲಿಯಾಗಿದ್ದರು. ಆ ನಂತರ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯವಾಡಲು ಅವಕಾಶ ನೀಡಿರಲಿಲ್ಲ.

ಆದರೆ, ವೆಂಕಟೇಶ್‌ ಪ್ರಸಾದ್‌ ಅವರ ಸತತ ಪ್ರಯತ್ನದ ಫಲವಾಗಿ ಈ ಬಾರಿ ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯಗಳನ್ನಾಡಿಸಲು ಷರತ್ತಿನ ಮೇಲೆ ಅನುಮತಿ ನೀಡಲಾಗಿದೆ. ಹೀಗಾಗಿ ಮತ್ತೆ ಹಳೆ ದುರಂತ ಸಂಭವಿಸಲು ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಭೂತಪೂರ್ವ ಪೊಲೀಸ್‌‍ ಭದ್ರತೆ ಕಲ್ಪಿಸಲಾಗಿದೆ.

ಐಪಿಎಲ್‌ ಟಿಕೆಟ್‌ ಹೆಸರಲ್ಲಿ ಸೈಬರ್‌ ವಂಚಕರ ಜಾಲಕ್ಕೆ ಬೀಳದಿರಿ

ಬೆಂಗಳೂರು,ಏ.5- ಸಾಮಾಜಿಕ ಜಾಲ ತಾಣದಲ್ಲಿ ಐಪಿಎಲ್‌ ಟಿಕೆಟ್‌ ಬೇಕಾದಲ್ಲಿ ಸಂಪರ್ಕಿಸಿ ಎಂಬ ನಕಲಿ ಲಿಂಕ್‌ ಕಳುಹಿಸಿ ವಂಚಿಸುತ್ತಿರುವ ಸೈಬರ್‌ ವಂಚಕರ ಬಗ್ಗೆ ಇರಲಿ ಎಚ್ಚರ….. ಐಪಿಎಲ್‌ ಟಿಕೆಟ್‌ ಧಮಾಕ ಹೆಸರಿನಲ್ಲಿ ಕ್ರಿಕೆಟ್‌ ಪ್ರಿಯರನ್ನು ಸೈಬರ್‌ ವಂಚಕರು ಯತ್ನಿಸುತ್ತಿದ್ದು, ಟೆಕ್ಕಿಯೊಬ್ಬರು ಅವರ ಗಾಳಕ್ಕೆ ಬಿದ್ದು 1.46 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆ ಮಹದೇವಪುರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌‍ಕೆ ಪಂದ್ಯದ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಟಿಕೆಟ್‌ಗೆ ಸಂಬಂಧಿಸಿದಂತೆ ಟೆಕ್ಕಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್‌ ಗಮನಿಸಿದ್ದಾರೆ. ಆ ಪೋಸ್ಟ್‌ ಹಾಕಿದವರನ್ನು ಸಂಪರ್ಕಿಸಿದಾಗ, ಪಂದ್ಯದ ಟಿಕೆಟ್‌ಗಳು, ಊಟದ ಕೂಪನ್‌, ವಿಐಪಿ ಸೌಲಭ್ಯ ಒಳಗೊಂಡಿದೆ ಎಂದು ಆಮಿಷವೊಡ್ಡಿದ್ದಾರೆ.

ಆತನ ಮಾತನ್ನು ನಂಬಿದ ಟೆಕ್ಕಿ ತನ್ನ ಮತ್ತು ತಾಯಿಯ ಬ್ಯಾಂಕ್‌ ಖಾತೆಗಳಿಂದ ಟಿಕೆಟ್‌ಗಾಗಿ ಹಣ ಪಾವತಿಸಿದ್ದಾರೆ.ಹಣ ಪಾವತಿ ಬಳಿಕ ಟೆಕ್ಕಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ 10 ರ ಬಳಿ ಬರುವಂತೆ ತಿಳಿಸಿದ್ದು, ಅದರಂತೆ ಟೆಕ್ಕಿ ಕನಿಷ್ಟ ದರದ ಟಿಕೆಟ್‌ಗಳನ್ನು ಕೇಳಿದ್ದಾರೆ.

ವಂಚಕನು ಕೂಪನ್‌ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಲ್ಲದೇ ಹಂತ ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 1.46 ಲಕ್ಷ ಹಣವನ್ನು ವರ್ಗಾಹಿಸಿಕೊಂಡಿದ್ದಾನೆ.

ಕೆಲ ಸಮಯದ ಬಳಿಕ ತಾನು ವಂಚನೆಗೆ ಒಳಗಾಗಿರುವುದನ್ನು ಅರಿವಿಗೆ ಬಂದು ತಕ್ಷಣ ಟೆಕ್ಕಿ ಸೈಬರ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟೆಕ್ಕಿಯಿಂದ ಹಣ ಪಾವತಿಯಾಗಿರುವ ವಂಚಕರ ಬ್ಯಾಂಕ್‌ ಖಾತೆಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಬಿಎಂಟಿಸಿ ಬಸ್‌‍ ವ್ಯವಸ್ಥೆ :

ಬೆಂಗಳೂರು,ಏ.5- ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಿಂದ ನಗರದ ವಿವಿಧ ಪ್ರದೇಶಗಳಿಗೆ ವಿಶೇಷ ಬಸ್ಸು ಸೌಲಭ್ಯವನ್ನು ಕಲ್ಪಿಸಲಿದೆ.

ಪ್ರಯಾಣಿಕರ ದಟ್ಟಣೆಗನುಗುಣವಾಗಿ ಕ್ರೀಡಾಂಗಣದಿಂದ ವಿವಿಧ ಪ್ರದೇಶಗಳಿಗೆ ಬಸ್ಸು ಸೌಲಭ್ಯ ಒದಗಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ಸು ನಿಲ್ದಾಣ, ಎಚ್‌ಎಎಲ್‌ ರಸ್ತೆ, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟ ನ್ಯಾಶನಲ್‌ ಪಾರ್ಕ್‌, ಜನಪ್ರಿಯ ಟೌನಶಿಪ್‌, ಆರ್‌.ಕೆ.ಹೆಗ್ಡೆ ನಗರ, ಯಲಹಂಕ, ನಾಗವಾರ, ಟ್ಯಾನರಿ ರಸ್ತೆ, ಹೊಸಕೋಟೆ, ಬನಶಂಕರಿಗಳಿಗೆ ವಿಶೇಷ ಬಸ್ಸು ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದೆ.

RELATED ARTICLES

Latest News